ಕುಖ್ಯಾತ ರೌಡಿಗೆ ಶೂಟೌಟ್ ನಡೆಸಿ ಬಂಧನ ಮಾಡಲಾಗಿದೆ.
ಕುಖ್ಯಾತ ರೌಡಿ ಗೌರೀಶ್ ಎಂಬಾತನನ್ನು ಬಂಧಿಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ರೌಡಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ರೌಡಿಯ ಕಾಲಿಗೆ ಶೂಟೌಟ್ ನಡೆಸಿ ಬಂಧಿಸಿದ ಘಟನೆ ನಡೆದಿದೆ.
ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದ್ದರು. ರೌಡಿಶೀಟರ್ ಗೌರೀಶ್ ವಿರುದ್ಧ ಮಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರೌಡಿಶೀಟರ್ ನ್ನು ಬಂಧಿಸಲು ಬಲೆ ಬೀಸಿದ್ದರು.
ರೌಡಿಶೀಟರ್ ನನ್ನು ಬಂಧಿಸಲು ತೆರಳಿದ್ದ ಪೊಲೀಸ್ ತಂಡದಲ್ಲಿನ ಪೇದೆ ಶೀನಪ್ಪ ಎಂಬವರ ಮೇಲೆ ಆರೋಪಿ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಜಾಗೃತರಾದ ಎಸ್ ಐ ಕಬ್ಬಾಳ್ ರಾಜ್ ಅವರು ತಮ್ಮ ಪ್ರಾಣರಕ್ಷಣೆಗಾಗಿ ರೌಡಿಶೀಟರ್ ನ ಕಾಲಿಗೆ ಫೈರಿಂಗ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ರೌಡಿಶೀಟರ್ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೂರು ಕೊಲೆ ಆರೋಪ ಪ್ರಕರಣಗಳಿವೆ.