ಬೆಂಗಳೂರು :ಕಡ್ಡಾಯ ನಿಮಯದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಪಕ್ಷಗಳಾಗಲೀ, ಜನರಾಗಲೀ ಈ ಕಾಯಿದೆಯನ್ನು ವಿರೋಧಿಸಿಲ್ಲ. ರಾಜ್ಯಪಾಲರು ಕರ್ನಾಟಕಕ್ಕೆ ರಾಜ್ಯಪಾಲರು ಎಂಬುದು ನೆನಪಿನಲ್ಲಿಡಬೇಕೆಂದು ಡಿಕೆಶಿ ಕುಟುಕಿದ್ದಾರೆ. ಇದು ರಾಜ್ಯದ ಗೌರವದ ವಿಚಾರವಾಗಿದೆ. ಇದೊಂದು ಭಾವನಾತ್ಮಕ ವಿಚಾರ. ನೀವೂ ಸಹ ಕರ್ನಾಟಕದಲ್ಲಿದ್ದೀರಿ. ಕರ್ನಾಟಕದ ರಾಜ್ಯಪಾಲರಾಗಿದ್ದೀರಿ. ಇಂಥಾ ವಿಚಾರದಲ್ಲಿ ಸರ್ಕಾರದ ವಿರುದ್ದ ಯಾವುದೇ ತಪ್ಪು ಕಂಡು ಹಿಡಿಯುವುದು ಸರಿಯಲ್ಲ ಎಂದು ಡಿಕೆಶಿ ರಾಜ್ಯಪಾಲರಿಗೆ ತಾಕೀತು ಮಾಡಿದ್ದಾರೆ.
ಸದನದಲ್ಲಿ ಈ ಕಾಯಿದೆ ಘೋಷಿಸುವ ಮುನ್ನವೇ ಜಾರಿಗೆ ತರಲು ಸುಗ್ರೀವಾಜ್ಞೆಯ ಮೂಲಕ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಇದು ರದ್ದಾಗಿರುವ ವಿಷಯವನ್ನು ನಾನೂ ಸಹ ಮಾಧ್ಯಮಗಳಲ್ಲಿ ಗಮನಿಸಿದೆ. ನಮ್ಮ ದೇಶದ ರಕ್ಷಣೆಯ ವಿಚಾರದಲ್ಲಿ ನಾವು ನಡೆದುಕೊಳ್ಳುತ್ತೇವೋ ನಮ್ಮ ನಾಡು ನುಡಿಯ ವಿಚಾರದಲ್ಲಿಯೂ ಅಷ್ಟೇ ಕಾಳಜಿ ವಹಿಸುತ್ತೇವೆ ಎಂದು ಡಿಕೆಶಿ ಹೇಳಿದರು.