ಬೆಂಗಳೂರು : ಶಿವಾಜಿನಗರದ ನಟೋರಿಯಸ್ ರೌಡಿಶೀಟರ್ ಇಪ್ತಿಯಾಕ್ ಅಹ್ಮದ್ ಜೊತೆ ಆತ್ಮೀಯವಾಗಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗಂಭೀರ ಚರ್ಚೆ ನಡೆಸಿದ್ದು, ಇದೀಗ ಇದು ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಕೆಪಿಸಿಸಿ ಅಧ್ಯಕ್ಷರ ಕೋಣೆಯಲ್ಲಿ ವೇಣುಗೋಪಾಲ್ ರೌಡಿಶೀಟರ್ ಇಪ್ತಿಯಾಕ್ ಅಹ್ಮದ್ ಜೊತೆ ಮಾತುಕತೆ ನಡೆಸಿದ್ದಾರೆ. ಉಪಚುನಾವಣೆಯ ಬೆನ್ನಲ್ಲೇ ಅವರ ಈ ನಡೆ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೇ ರೌಡಿ ಶೀಟರ್ ಜೊತೆ ವೇಣು ಗೋಪಾಲ್ ಭೇಟಿ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾಮಾನ್ಯ ಕಾರ್ಯಕರ್ತರು, ನಾಯಕರೊಂದಿಗೆ ಕೆಸಿ ವೇಣುಗೋಪಾಲ್ ಮಾತಾಡಲ್ಲ. ಆದ್ರೆ ರೌಡಿಶೀಟರ್ ಜೊತೆಗೆ ವೇಣುಗೋಪಾಲ್ ಮಾತನಾಡಿದ್ದಾರೆ. ಪಕ್ಷ ಸಂಘಟನೆ ಅಂದ್ರೆ ಇದೇನಾ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.