ಬೆಂಗಳೂರು: ಮುಸ್ಲಿಂ ದಂಪತಿಗಳಿಗೆ ವಿವಾಹ ನೋಂದಣಿ ಪತ್ರವನ್ನೂ ವಕ್ಫ್ ಬೋರ್ಡ್ ನೀಡುತ್ತಿರುವುದು ಗಮನಕ್ಕೆ ಬಂದಿದ್ದು ಇದರ ಬಗ್ಗೆ ಹೈಕೋರ್ಟ್ ಗರಂ ಆಗಿ ಪ್ರಶ್ನೆ ಮಾಡಿದೆ.
ಈ ಬಗ್ಗೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈಗಾಗಲೇ ವಕ್ಫ್ ನೋಟಿಸ್ ವಿಚಾರವಾಗಿ ಭಾರೀ ವಿವಾದವಾಗಿದೆ. ಇದರ ಮಧ್ಯೆ ವಕ್ಫ್ ಬೋರ್ಡ್ ನ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ.
ಮುಸ್ಲಿಂ ವಿವಾಹಿತ ದಂಪತಿಗೆ ವಕ್ಫ್ ಬೋರ್ಡ್ ನಿಂದಲೇ ವಿವಾಹ ನೋಂದಣಿ ಪತ್ರ ನೀಡುವ ಅಧಿಕಾರವನ್ನು ನೀಡಿರುವ ಬಗ್ಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರ 2023 ರ ಆಗಸ್ಟ್ 30 ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಲಂ ಪಾಷಾ ಎಂಬವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್ ಎ ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರ ನ್ಯಾಯಪೀಠ ಸರ್ಕಾರದ ಮೇಲೆ ಗರಂ ಆಗಿ ಪ್ರಶ್ನೆ ಮಾಡಿದೆ. ವಕ್ಫ್ ಮಂಡಳಿಗೆ ಯಾವ ಆಧಾರದಲ್ಲಿ ಅಧಿಕಾರ ನೀಡಲಾಗಿದೆ ಎಂದು ಪ್ರಶ್ನಿಸಿದ್ದಲ್ಲದೆ ಎರಡು ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮುಂದಿನ ವಿಚಾರಣೆಯನ್ನು ನವಂಬರ್ 21 ಕ್ಕೆ ಮುಂದೂಡಲಾಗಿದೆ. ವಿವಾಹ ನೋಂದಣಿ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಬಹುದು ಎಂಬುದ ವಕ್ಫ್ ಕಾಯ್ದೆಯಲ್ಲಿ ಎಲ್ಲಿದೆ ಎಂದು ಸಾಬೀತಪಡಿಸಲು ಹೈಕೋರ್ಟ್ ಸೂಚಿಸಿದೆ. ಈ ಬಗ್ಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಹೇಳಿದೆ.