ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವ ಪ್ರಯತ್ನ ನಡೆಸಿದೆ. ರಾಜ್ಯಕ್ಕೆ ಸ್ವಂತ ಧ್ವಜ ವಿನ್ಯಾಸಗೊಳಿಸಲು ಸರ್ಕಾರ 9 ಸದಸ್ಯರ ಸಮಿತಿ ನೇಮಿಸಿದೆ. ಧ್ವಜಕ್ಕೆ ಕಾನುನು ಮಾನ್ಯತೆ ನೀಡುವ ಸಂಬಂಧ ಸಮಿತಿ ವರದಿ ಸಲ್ಲಿಸಲಿದೆ.
ಒಂದೊಮ್ಮೆ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ದೊರೆತಲ್ಲಿ ಸಂವಿಧಾನದ 370ನೇ ಸೆಕ್ಷನ್ ಅಡಿ ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು-ಕಾಶ್ಮೀರದ ನಂತರ ಅಧಿಕೃತ ರಾಜ್ಯ ಧ್ವಜ ಹೊಂದಲಿರುವ ಎರಡನೆ ರಾಜ್ಯವಾಗಲಿದೆ.
ರಾಜ್ಯದ ಧ್ವಜಕ್ಕೆ ಕಾನೂನು ಮಾನ್ಯತೆ ನೀಡುವ ಕ್ರಮಕ್ಕೆ 2012ರಲ್ಲಿ ಬಿಜೆಪಿ ಸರ್ಕಾರ ತೀವ್ರ ಆಕ್ಷೇಪವ್ಯಕ್ತಪಡಿಸಿತ್ತು. ದೇಶದ ಐಕ್ಯತೆಗೆ ಅಡ್ಡಿ ಉಂಟುಮಾಡುವ ಕಾರಣ ಕೆಂಪು-ಹಳದಿಯ ಕನ್ನಡದ ಧ್ವಜವನ್ನು ಅಧಿಕೃತ ರಾಜ್ಯ ಧ್ವಜ ಎಂದು ಘೋಷಿಸಲು ಸಮ್ಮತಿ ಇಲ್ಲ ಎಂದು ಹೈಕೋರ್ಟ್ ಗೆ ಅಂದಿನ ಸರ್ಕಾರ ತಿಳಿಸಿತ್ತು. ಇನ್ನು ಹಿಂದಿ ಹೇರಿಕೆ ವಿಚಾರವಗೈ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಧ್ವಜ ಪ್ರಸ್ತಾಪ ಮುಂದಿಟ್ಟಿದ್ದು, ಈ ಬಗ್ಗೆ ಬಿಜೆಪಿ ಒಂದು ರಾಷ್ಟ್ರದಲ್ಲಿ ಎರಡು ಧ್ವಜಗಳಿರಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.