ಬೆಂಗಳೂರು: ಮೆಜೆಸ್ಟಿಕ್ ನಲ್ಲಿರುವ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರದಲ್ಲಿ ಇನ್ನುಮುಂದೆ ಚಿತ್ರಪ್ರದರ್ಶನ ಇರುವುದಿಲ್ಲ. `ಹುಲಿರಾಯ’ ಚಿತ್ರದ ಕೊನೆಯ ಪ್ರದರ್ಶನದೊಂದಿಗೆ ಕಪಾಲಿ ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ.
49 ವರ್ಷಗಳ ಇತಿಹಾಸವಿರುವ ಕಪಾಲಿ ಥಿಯೇಟರ್ ಶಾಶ್ವತವಾಗಿ ಸ್ಥಗಿತಗೊಳ್ಳಲಿದ್ದು, ಇತಿಹಾಸದ ಪುಟ ಸೇರಲಿದೆ. ಇಂದಿನಿಂದ ಕಪಾಲಿ ಚಿತ್ರಮಂದಿರಲ್ಲಿ ಯಾವುದೇ ಚಿತ್ರಪ್ರದರ್ಶನ ಇರುವುದಿಲ್ಲ. ಸ್ವಲ್ಪ ದಿನದಲ್ಲಿ ಚಿತ್ರಮಂದಿರ ನೆಲಸಮ ಕಾರ್ಯ ಶುರುವಾಗಲಿದೆ.
1,465 ಆಸನಗಳನ್ನು ಹೊಂದಿದ್ದ ಕಪಾಲಿ ಚಿತ್ರ ಮಂದಿರವನ್ನು 1968ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಉದ್ಘಾಟಿಸಿದ್ದರು. ಆ ಕಾಲಕ್ಕೆ ಇದು ಜಗತ್ತಿನ 3ನೇ ಅತಿ ದೊಡ್ಡ, ಏಷ್ಯಾದಲ್ಲೇ ಮೊದಲ ಏಕಸ್ಕ್ರೀನ್ ಬಹುದೊಡ್ಡ ಸಿನಿಮಾ ಥಿಯೇಟರ್ ಎನ್ನುವ ಹೆಗ್ಗಳಿಕೆ ಗಳಿಸಿತ್ತು.
ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅಭಿನಯದ ‘ಮಣ್ಣಿನ ಮಗ’ ಚಿತ್ರ ಇದೇ ಚಿತ್ರಮಂದಿರದಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಮೊದಲ ಚಿತ್ರ. ಇನ್ನುಮುಂದೆ ಇಲ್ಲಿ ದೊಡ್ಡ ಮಾಲ್ ತಲೆಯೆತ್ತಲಿದೆ ಎನ್ನಲಾಗಿದೆ.