ಬೆಂಗಳೂರು: ಕ್ಷುಲ್ಲಕ ವಿಷಯಕ್ಕೆ ಕುಪಿತರಾದ ಸಹಪಾಠಿಗಳು ತನ್ನ ಸ್ನೇಹಿತನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿಗಳಾದ ತೇಜಸ್ ಕುಮಾರ್, ಮನೋಜ್, ತುಷಾರ್, ಶಂಕರ್, ರೀಜಾ ಜೋಸೆಫ್, ಸುಜಿತ್ ರಾಜ್ ಹಾಗೂ ಅಖಿಲೇಶ್ ಹಲ್ಲೆ ನಡೆಸಿದ ಸ್ನೇಹಿತರು ಎಂದು ತಿಳಿದು ಬಂದಿದೆ. ನ್ಯಾಯಾಧೀಶರ ಮಗ ಎನ್ನಲಾದ ಸಾಥ್ವಿಕ್ ಹಲ್ಲೆಗೊಳಗಾದ ಸಹಪಾಠಿ.
ನಗರದ ಎಸ್.ಸಿ ರೋಡ್‌ನ ಬಿಎಂಸ್ ಲಾ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿರುವ ನ್ಯಾಯಾಧೀಶರ ಮಗ ಸಾಥ್ವಿಕ್, ತರಗತಿಯ ಲೀಡರ್(ಕ್ಲಾಸ್‌ನ ರೆಪ್ರಸೆಂಟೆಟಿವ್) ಆಗಿದ್ದನು. ತನ್ನ ಸಹಪಾಠಿಗಳು ತರಗತಿಗೆ ಸರಯಾಗಿ ಬರುತ್ತಿಲ್ಲ ಎಂದು ಉಪನ್ಯಾಸಕರಿಗೆ ವರದಿ ಕೊಟ್ಟಿದ್ದನು. ಇದರಿಂದಾಗಿ ಸಹಪಾಠಿಗಳೆಲ್ಲರೂ ಸಾಥ್ವಿಕ್ ವಿರುದ್ಧ ಕುಪಿತರಾಗಿದ್ದರು. ಅಲ್ಲದೆ, ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
ಊಟಕ್ಕೆ ಆಹ್ವಾನ ನೆಪದಲ್ಲಿ ಹಲ್ಲೆ:
ಹಲ್ಲೆ ನಡೆಸುವ ಸಲುವಾಗಿ ಸಾಥ್ವಿಕ್‌ನನ್ನು ಸಹಪಾಠಿಗಳು, ಆ.26 ರಂದು ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯ ಹೋಟೆಲ್‌ವೊಂದರಲ್ಲಿ ಸೇರಿದ್ದರು. ಸಾಥ್ವಿಕ್‌ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅದರಂತೆ, ಮಧ್ಯಾಹ್ನ 2.15ರ ಸುಮಾರಿಗೆ ಸಾಥ್ವಿಕ್ ತೆರಳಿದ್ದನು. ಈ ವೇಳೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆಸುವ ವೇಳೆ ಸಹಪಾಠಿ ತೇಜಸ್ ವಿರುದ್ಧ ರೂಮರ್ಸ್ ಹರಡಿಸುತ್ತೀಯಾ? ಎಂದು ಧಮ್ಕಿ ಹಾಕಿದ್ದಾರೆ. ಈ ವೇಳೆ ಸಾದ್ವಿಕ್ ಮೊಬೈಲ್ ತೆಗೆದು ಪೋಷಕರಿಗೆ ಕರೆ ಮಾಡಲು ಮುಂದಾದಾಗ ಬಾಟಲಿಯಿಂದ ಹಲ್ಲೆ ನಡೆಸಿ, ಮೊಬೈಲ್‌ನ್ನು ಒಡೆದು ಹಾಕಿದ್ದಾರೆ. ಸಹಪಾಠಿಗಳು ನಡೆಸಿದ ಹಲ್ಲೆಯಿಂದಾಗಿ ಸಾಥ್ವಿಕ್ ಮುಖ, ತುಟಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಸಂಬಂಧ ಹಲ್ಲೆಗೊಳಗದ ಸಾಥ್ವಿಕ್‌ನ ಪೋಷಕರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.