ರಾಜಸ್ತಾನಿ ಮೂಲದ ಕಾರ್ಮಿಕರಿಗೆ ನ್ಯಾಯಾಧೀಶರೊಬ್ಬರು ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದಾರೆ.
ಕಲಬುರಗಿ ನಗರದ ಹೀರಾಪುರ್ ಕ್ರಾಸ್ ರಿಂಗ್ ರಸ್ತೆ ಬಳಿ ಟೆಂಟ್ ಹಾಕಿಕೊಂಡು ದೇವರ ಮೂರ್ತಿಗಳ ಕೆತ್ತೆನೆಯಲ್ಲಿ ತೊಡಗಿರುವ ರಾಜಸ್ತಾನಿ ಮೂಲದ ಶಿಲ್ಪಕಲೆಯ ಕಾರ್ಮಿಕರಿಗೆ ಜಿಲ್ಲಾಡಳಿತದ ಆಹಾರ ಸಮಿತಿಯ ಪರವಾಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಕೆ.ತಾಳಿಕೊಟಿ ಅವರು ಆಹಾರದ ಕಿಟ್ ವಿತರಣೆ ಮಾಡಿದರು.
ರಾಜಸ್ತಾನ ಮೂಲದ ಅಲೆಮಾರಿಗಳಿಗೆ ಪಡಿತರ ಚೀಟಿ ಇಲ್ಲದ ಕಾರಣ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೆ ಜಿಲ್ಲಾಡಳಿತದ ಆಹಾರ ಸಮಿತಿ ಸದಸ್ಯರೊಂದಿಗೆ ಅಲೆಮಾರಿಗಳು ವಾಸಿಸುವ ಟೆಂಟ್ ಗಳಿಗೆ ಹೋಗಿ ಅಲ್ಲಿ ವಾಸವಿದ್ದ ಸುಮಾರು 165 ಜನರ 18 ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ, ಗೋಧಿ, ಬೇಳೆ ಸೇರಿದಂತೆ ಅಡುಗೆಗೆ ಬೇಕಾದ ಅವಶ್ಯಕ ಅಹಾರ ಪದಾರ್ಥಗಳ ಕಿಟ್ ವಿತರಿಸಿದರು.