ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐ ಭಾರತದ ವತಿಯಿಂದ ಕಳೆದ ಆಗಸ್ಟ್ 8ರಂದು ವಿದ್ಯಾರ್ಥಿಗಳಿಗಾಗಿ ದೇಶದಾದ್ಯಂತ ಏಕಕಾಲಕ್ಕೆ ನಡೆದ 'ಜೆಸಿಐ ಭಾರತ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ -2021' (ಎನ್. ಎಲ್. ಟಿ. ಎಸ್.)ರ ಫಲಿತಾಂಶದಲ್ಲಿ ಜೇಸಿಸ್ ವಲಯ 14ರಲ್ಲೇ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಅದ್ವಿತೀಯ ಸಾಧನೆ ಮಾಡಿದ ಕೊಡಗಿನ ವಿದ್ಯಾರ್ಥಿನಿ ಅಪೇಕ್ಷಾ ದೇಚಮ್ಮ ಅವರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಲಾಯಿತು.
ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ನಡೆದ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 11ನೇ ಘಟಕಾಡಳಿತ ಮಂಡಳಿಯ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜೇಸಿಸ್ ನ ವಲಯ14ರ ನಿಕಟಪೂರ್ವ ವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ ಅಧಿಕೃತ ಸಂಚಿಕೆಯ ಸಂಪಾದಕ ಮಂಡಳಿಯ ಮುಖ್ಯಸ್ಥರೂ ಆಗಿರುವ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಜೆಸಿಐ ಭಾರತದ ವತಿಯಿಂದ ನೀಡಲಾದ ರೂ. 5 ಸಾವಿರ ನಗದು ಮತ್ತು ವಿಶೇಷ ಪಾರಿತೋಷಕವನ್ನು ಅಪೇಕ್ಷಾ ದೇಚಮ್ಮ ಅವರಿಗೆ ಹಸ್ತಾಂತರಿಸಿ ಗೌರವಿಸಿದರು.
ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ವತಿಯಿಂದ ಕಳೆದ ಆಗಸ್ಟ್ 8ರಂದು ಆನ್ಲೈನ್ ಮೂಲಕ ಪರೀಕ್ಷೆ ಬರೆದ 234 ವಿದ್ಯಾರ್ಥಿಗಳಲ್ಲಿ ಗೋಣಿಕೊಪ್ಪಲು ಬಳಿಯ ಕಳತ್ತುಮಾಡಿನ ಲಯನ್ಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅಪೇಕ್ಷಾ ದೇಚಮ್ಮ ಇಡೀ ವಲಯದಲ್ಲಿ ಪರೀಕ್ಷೆ ಎದುರಿಸಿದ ಒಟ್ಟು 10507 ವಿದ್ಯಾರ್ಥಿಗಳ ಪೈಕಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಗಮನಸೆಳೆದಿದ್ದರು.
ಜೆಸಿಐ ಭಾರತವು 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಈ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು ಪ್ರತಿವರ್ಷ ಆಯೋಜಿಸುತ್ತಿದೆ. ಇಡೀ ವಲಯದಲ್ಲೇ ಪ್ರಥಮ ಸ್ಥಾನ ಪಡೆದ ಅಪೇಕ್ಷಾ ದೇಚಮ್ಮ ಅವರು ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿಗಳಾದ ವಿ. ಎಂ. ಲವ ಮತ್ತು ವಿನು ದಂಪತಿಗಳ ಪುತ್ರಿಯಾಗಿದ್ದಾರೆ.
ಘಟಕದ ನೂತನ ಅಧ್ಯಕ್ಷರಾದ ಎ. ಪಿ. ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್. ಎಂ. ಎ.) ರಾಷ್ಟ್ರೀಯ ಮಂಡಳಿ ನಿರ್ದೇಶಕರಾದ ಎ. ಎಸ್. ನರೇನ್ ಕಾರ್ಯಪ್ಪ, ವಲಯ 14ರ 'ಡಿ' ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಯಶಸ್ವಿನಿ, ಜೆಸಿಐ ಭಾರತದ ಎಸ್.ಎಂ.ಎ. ವಲಯ ಮಂಡಳಿ ಮುಖ್ಯಸ್ಥರಾದ ಮೈಸೂರಿನ ಕೆ.ಎಸ್. ಕುಮಾರ್, ಎಸ್. ಎಂ.ಎ ವಿಭಾಗದ ವಲಯ ಸಂಯೋಜಕರಾದ ಬಿ.ಈ. ಕಿರಣ್, ನಿರ್ಗಮಿತ ಅಧ್ಯಕ್ಷರಾದ ಎಂ. ಎನ್. ವನಿತ್ ಕುಮಾರ್, ನೂತನ ಕಾರ್ಯದರ್ಶಿ ಶರತ್ ಸೋಮಣ್ಣ, ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾದ ಎ.ಡಿ.ಚರಣ್ ಚಂಗಪ್ಪ ಉಪಸ್ಥಿತರಿದ್ದರು.