ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ ಪೈಸೆಯೂ ಹೆಚ್ಚು ಮಾಡಿಲ್ಲ ಎಂದು ಹೇಳುವ ಮೂಲಕ ಸಿಎಂ ತಪ್ಪು ಮಾಹಿತಿ ನೀಡಿದ್ದಾರೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ.
ಸಚಿವ ರಮೇಶ್ ಕುಮಾರ್ ಸಲಹೆ ಮೇರೆಗೆ ಹಕ್ಕು ಚ್ಯುತಿ ಮೇಲಿನ ಚರ್ಚೆಗೆ ಅವಕಾಶ ನೀಡಲಾಗಿದ್ದು, ವಿಪಕ್ಷ ನಾಯಕ ಶೆಟ್ಟರ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ತಮ್ಮ ಸ್ಥಾನದ ಘನತೆ ಮೀರಿ ವರ್ತಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳವಾಗಿಲ್ಲ ಎಂದು ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ನಾವು ವಿವರಣೆ ಕೊಡಲು ಸಿದ್ದರಾಮಯ್ಯ ಮತ್ತು ಸಚಿವೆ ಉಮಾಶ್ರೀ ಅವಕಾಶ ನೀಡಿಲ್ಲ ಎಂದರು.
ಈ ಕುರಿತು, ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಸಿಎಂ ಪರ ಬ್ಯಾಟಿಂಗ್ ಮಾಡಿದರು. ಸಿಎಂ ಭಾವಪರವಾಗಿ ಆ ರೀತಿ ಹೇಳಿದ್ದಾರೆ. ಸುಳ್ಳು ಮಾಹಿತಿ ನೀಡುವ ಉದ್ದೇಶ ಸಿಎಂಗೆ ಇರಲಿಲ್ಲ. ಹಕ್ಕು ಚ್ಯುತಿ ಪರಿಣಾಮಕಾರಿ ಅಸ್ತ್ರ ಅದನ್ನ ವಿವೇಚನೆಯಿಂದ ಬಳಸಬೇಕು. ಹಕ್ಕು ಚ್ಯುತಿ ಪ್ರಸ್ತಾವನೆ ಕೈಬಿಡುವಂತೆ ರಮೇಶ್ ಕುಮಾರ್, ಸ್ಪೀಕರ್`ಗೆ ಮನವಿ ಮಾಡಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ, ಸಿಎಂ ಸಿದ್ದರಾಮಯ್ಯ ಭಾವೋದ್ವೇಗದಿಂದ ಈ ಹೇಳಿಕೆ ನೀಡಿಲ್ಲ. ಉದ್ದೇಶಪೂರ್ವಕವಾಗಿಯೇ ಹೇಳಿದ್ದಾರೆ. ಹೀಗಾಗಿ, ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಬರುತ್ತೆ ಎಂದು ವಾದಿಸಿದ್ದಾರೆ.