ಯಾದಗಿರಿ : ಐಪಿಎಸ್ ಅಧಿಕಾರಿ ಹಾಗೂ ಸಿಐಡಿ ಅಪರಾಧ ವಿಭಾಗದ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ಅವರಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಹಿರೇಮಠದಲ್ಲಿ ಕಾಯಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಗದ ಎಲ್ಲಾ ಧಾರ್ಮಿಕ ಕೇಂದ್ರಗಳ ಮೂಲ ಉದ್ದೇಶ ಸರ್ವೇ ಜನ ಸುಖಿಯೋ ಭವ, ಸತ್ಯಂ ಧರ್ಮಂ ಜಯ, ಸತ್ಯಮೇಚ ಜಯತೇ, ಮನುಷ್ಯನಿಗೆ ದೇವರು, ಧರ್ಮ, ಸರಿ-ತಪ್ಪು, ಸಂಸ್ಕಾರವನ್ನು ಹೇಳಿಕೊಡುವ ಮನಸ್ಸಿನ ಶುದ್ಧೀಕರಣ ಕೇಂದ್ರಗಳು ಮಠ, ಮಸೀದಿ, ಚರ್ಚ್, ಜೈನ ಬಸೀದಿಗಳಾಗಿವೆ. ಮನುಷ್ಯನ ಮನಸ್ಸಿನ ಪರಿಶುದ್ದೀಕರಣ ದೇವಸ್ಥಾನಗಳಿಂದ ಸಾಧ್ಯ. ದೇವಸ್ಥಾನಗಳು ಜಾಗೃತಿ ಮತ್ತು ಶಕ್ತಿಪೀಠಗಳಾಗಿವೆ. ನಮ್ಮನ್ನು ರೀಚಾರ್ಜ್ ಮಾಡಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.
ತಮ್ಮ ವಿದ್ಯಾರ್ಥಿ ಜೀವನವನ್ನು ದೇವಾಪುರ ಮಠದಲ್ಲಿ ಸ್ಮರಿಸಿಕೊಂಡರು. ನಾನು ವಿದ್ಯಾರ್ಥಿಯಾಗಿದ್ದಾಗ ಮಠದಲ್ಲಿ ಪ್ರಸಾಧ ಮತ್ತು ವಿದ್ಯಾಧಾನ ನೀಡಿವೆ, ಹಾಗಾಗಿ ನಾನು ಒಬ್ಬ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು. ನಾನು ಮಠದಲ್ಲಿಯೇ ಓದಿದ ವಿದ್ಯಾರ್ಥಿ. ಲಿಂ.ಪುಟ್ಟರಾಜ ಗವಾಯಿಗಳ ಆಶ್ರಯ ಮತ್ತು ರಾಮಕೃಷ್ಣ ಮಠದ ಶ್ರೀಗಳ ಬೋಧನೆ ನನ್ನ ಜೀವನ ಪರಿವರ್ತನೆಗೆ ಕಾರಣವಾಯಿತು. ಹುಬ್ಬಳ್ಳಿ ಸಿದ್ದರೂಢ ಮಠ, ಮುರುಘಾ ಮಠಗಳನ್ನು ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ಮತ್ತು ಮಠಗಳ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು.