ಕಳೆದ 99 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕಾಡಾನೆ ಸಿದ್ದ ಇನ್ನೇನು ಎದ್ದು ಓಡಾಡುತ್ತಾನೆ ಎನ್ನುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಆತನ ಆರೋಗ್ಯ ಸುಧಾರಣೆಗಾಗಿ ನಡೆಸಿದ ಎಲ್ಲ ಪೂಜೆ ಪುನಸ್ಕಾರಗಳು, ಹಾರೈಕೆಗಳೆಲ್ಲ ನಿಷ್ಫಲವಾಗಿದ್ದು ಗುರುವಾರ- ಶುಕ್ರವಾರ ನಡುವಿನ ರಾತ್ರಿ 2 ಗಂಟೆಗೆ ನಮ್ಮನಗಲಿದ್ದಾನೆ.
ಕಳೆದ ಆಗಸ್ಟ್ 30 ರಂದು ಕಾಲುವೆಯಲ್ಲಿ ಬಿದ್ದು ಕಾಲು ಮುರಿದುಕೊಂಡ ಸಿದ್ದನಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲಿಲ್ಲ. ನೋವಿನಿಂದ ಒದ್ದಾಡುತ್ತಿದ್ದ ಸಿದ್ದನ ಚಿಕಿತ್ಸೆಗೆ ಪ್ರತಿಭಟನೆಗಳು ನಡೆದು, ಮಾಧ್ಯಮಗಳಲ್ಲಿ ಆತನ ಕುರಿತು ವರದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ 'ಸೇವ್ ಸಿದ್ದ' ಅಭಿಯಾನ ನಡೆದಿತ್ತು. ಇವೆಲ್ಲ ನಡೆದ ಬಳಿಕ ಎಚ್ಚೆತ್ತ ಸರ್ಕಾರ, ಅರಣ್ಯ ಇಲಾಖೆ ಚಿಕಿತ್ಸೆಯನ್ನು ಪ್ರಾರಂಭಿಸಿತ್ತು. ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ನಿಶಕ್ತನಾಗಿ ಬಿದ್ದಿದ್ದ ಸಿದ್ದನನ್ನು ಕ್ರೇನ್ ಸಹಾಯದಿಂದ ಮೇಲೆತ್ತಿ "ಸೇಫ್ಟಿ ಟವರ್" ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದಾಗಲೇ ಸಾಕಷ್ಟು ಬಳಲಿದ್ದ ಆತನನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಲಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು.
ಆತನ ಉಳಿವಿಗೆ ಹೋಮಹವನಗಳು ಸಹ ನಡೆದಿದ್ದವು. ಆದರೆ ಗ್ರಾಮಸ್ಥರ ಹಾರೈಕೆಗಳು ಯಾವುದು ಫಲ ಕೊಡದೇ ಸಿದ್ದ ಸಾವನ್ನಪ್ಪಿದ್ದಾನೆ.
ಹೊರ ರಾಜ್ಯದಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯೂ ಕಂಡು ಬಂದಿತ್ತು. ಆದರೆ ಕಳೆದೊಂದು ವಾರಗಳಿಂದ ಆತ ಅತಿಯಾಗಿ ಬಳಲಿದಂತೆ ಕಂಡು ಬರುತ್ತಿದ್ದ ಆತ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.