ಪ್ರಪಂಚದ ಶ್ರೇಷ್ಠವಾದ ಗೋವಂಶ ಭಾರತೀಯ ಗೋವಂಶ. ಗೋವು ಅಂದರೆ ಭಾರತ. ಪ್ರಪಂಚ ಗೋವಿನ ಲಾಭವನ್ನು ಪಡೆಯಬೇಕು. 'ಗಾವೋ ವಿಶ್ವಸ್ಯ ಮಾತರಃ', ಗೋವು ವಿಶ್ವಜನನಿ, ವಿಶ್ವಮಾತೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿಶ್ಲೇಷಿಸಿದರು.
ಗೋವಿನ ಉತ್ಪನ್ನಗಳು ಪ್ರಪಂಚಕ್ಕೆ ಲಭ್ಯವಾಗಬೇಕು. ಭಾರತ ಗೋಮಾಂಸ ರಪ್ತು ಮಾಡಿ ಶ್ರೀಮಂತವಾಗಬೇಕಿಲ್ಲ, ಗೋಮೂತ್ರ ರಪ್ತು ಮಾಡಿ ಕೀರ್ತಿಶಾಲಿಯಾಗಲಿ. ರೋಗ ನೀಡುವ ಗೋಮಾಂಸಕ್ಕಿಂತ ಕ್ಯಾನ್ಸರ್ ನಂತಹ ರೋಗಗಳನ್ನು ಗುಣಪಡಿಸುವ ಗೋಮೂತ್ರವನ್ನು ಪ್ರಪಂಚ ಬಳಸಬೇಕು. ಇಡೀ ವಿಶ್ವವೇ ಗೋಮಾತೆಯ ಕೃಪೆಗೆ ಪಾತ್ರವಾಗಲಿ ಎಂದು ಆಶಿಸಿದರು.
ಬೆಂಗಳೂರಿನ ಸಂದೀಪ್ ಅವರಿಗೆ ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು, ನಗರವಾಸಿಗಳು ಗ್ರಾಮಜೀವನದ ಸ್ವಾದವನ್ನು ಪಡೆಯುವಂತಾಗಬೇಕು. ಗೋಸೇವೆಯಿಂದ ಮಾತ್ರ ಅದು ಸಾಧ್ಯ. ಅಂತಹ ಕೆಲಸವನ್ನು ಮಾಡಿದ ಸಂದೀಪ್ ಅಭಿನಂದನಾರ್ಹರು ಎಂದು ಆಶೀರ್ವದಿಸಿದರು.
ಉಡುಪಿಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಸಂತ ಸಂದೇಶ ನೀಡಿ ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಗೋವನ್ನು ಆರಾಧಿಸಬೇಕು. ಸಕಲ ದೇವತೆಗಳ ಸನ್ನಿಧಾನವಿರುವ ಗೋವು ಸಂಪತ್ತಿನ ಪ್ರತೀಕ. ಸಂಪತ್ತಿನ ಮೂಲ ಪರಿಸರ, ಆರೋಗ್ಯ, ಸದ್ಭುದ್ಧಿ ಎಲ್ಲವೂ ಗೋವಿನ ಮೂಲ. ಗೋವನ್ನು ಉಪೇಕ್ಷಿಸಿದರೆ ಯಾವುದೇ ಜಾಗತೀಕರಣವೂ, ಅಭಿವೃದ್ದಿಯೂ ಸಾಧ್ಯವಿಲ್ಲ ಎಂದರು.
ಗೋಸೇವಾ ಪುರಸ್ಕಾರ ಪಡೆದ ಬೆಂಗಳೂರಿನ ಸಂದೀಪ್ 'ಗೋಆಧಾರಿತ ತಾರಸಿ ಕೃಷಿ' ಎಂಬ ವಿಷಯದ ಕುರಿತು ಮಾತನಾಡಿದರು. ನಿಯಮಿತ ಸ್ಥಳಾವಕಾಶಗಳಿರುವ ನಗರ ಪ್ರದೇಶಗಳಲ್ಲಿ ತಾರಸಿಯ ಮೇಲೆ ಗವ್ಯಾಧಾರಿತ ಗೊಬ್ಬರಗಳನ್ನು ಉಪಯೋಗಿಸಿ ಹೇಗೆ ಕೈತೋಟ ಮಾಡಬಹುದು? ಹಾಗೂ ಅದರ ಮಹತ್ವವನ್ನು ವಿವರಿಸಿದರು.
ಶ್ರೀಭಾರತೀಪ್ರಕಾಶನವು ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಗೋಕಥಾಗೀತೆ ಧ್ವನಿಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ತ್ಯಾಗರಾಜ ಶರ್ಮಾ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಹರೀಶೆಮಂಗಳೂರು, ಅಂಬಾಗಿರಿ, ಹಾರ್ಸಿಕಟ್ಟ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ದೇಶಭಂಡಾರಿ ಸಮಾಜದವರು ಪಾದಪೂಜೆ ನಡೆಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಭರತ್ ಎಂ. ಹೆಗಡೆ ದಂಪತಿಗಳು ಸಭಾಪೂಜೆಯನ್ನು ನೆರವೇರಿಸಿದರು. ವಿದ್ವಾನ್ ಜಗದೀಶ ಶರ್ಮಾ ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
ಇಂದಿನ ಕಾರ್ಯಕ್ರಮ (03.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :
ಗೋಸಂದೇಶ : ಪಂಚಗವ್ಯ ಚಿಕಿತ್ಸೆ - ಮಾಧವ ಹೆಬ್ಬಾರ
ಲೋಕಾರ್ಪಣೆ : 'ಲೋಕಶಂಕರ' ಯಕ್ಷಗಾನ ಪ್ರಸಂಗ - ಐ. ಡಿ. ಗಣಪತಿ, ಐತ್ಲೂಮನೆ
ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು - ಮಾಧವ ಹೆಬ್ಬಾರ
ಸಂತ ಸಂದೇಶ : ಶ್ರೀಯುತ ಬಿಂದು ಮಾಧವ ಶರ್ಮ, ಶ್ರೀಕ್ಷೇತ್ರ ಬೆಳಗೂರು
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ 5.00 : ಕಲಾರಾಮ - ಗಾಯನ : ಪ್ರದ್ಯುಮ್ನ ಸಿ., ಪಿಟೀಲು : ಅಖಿಲಾ ಭಟ್, ಮೃದಂಗ : ದಾಶರಥಿ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ