73 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ ಕಾಲೇಜಿನಲ್ಲಿ 73 ವಿವಿಧ ಬಗೆಯ ಗುಲಾಬಿ ಹೂವುಗಳ ಗಿಡಗಳನ್ನು ನೆಡುವ ಮೂಲಕ ವಿಭಿನ್ನವಾಗಿ ದೇಶ ಪ್ರೇಮ ಹಾಗೂ ಪರಿಸರ ಪ್ರೇಮ ಸಾರಲಾಗಿದೆ.
ಮಂಡ್ಯ ಕೆ.ಆರ್.ಪೇಟೆಯಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ 73 ವಿವಿಧ ಬಗೆಯ ಗುಲಾಬಿ ಹೂವುಗಳ ಗಿಡಗಳನ್ನು ನೆಟ್ಟು ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಗುಲಾಬಿ ಹೂಗಳ ವನದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ, ಪಟ್ಟಣದ ವೈದ್ಯ ಡಾ.ಕೃಷ್ಣಮೂರ್ತಿ ಗುಲಾಬಿ ಹೂ ಗಿಡಗಳನ್ನು ನೆಟ್ಟು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿ ಕೊಂಡಾಡಿದ್ರು.
ಈಗಾಗಲೇ ಕಾಲೇಜು ಆವರಣದಲ್ಲಿ ನೂರಾರು ಬಗೆ ಹೂವು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ.
ಹಲಸು, ಮಾವು, ಹಿಪ್ಪೆ, ನೇರಳೆ, ಸೀತಾಫಲ, ರಾಮಫಲ, ಸೀಬೆ, ಸಪೋಟ, ಜಂನೇರಳೆ, ಚಕ್ಕೋತ, ಮೋಸಂಬಿ, ಪಾರಿಜಾತ ಪುಷ್ಪ, ಬೆಟ್ಟದನೆಲ್ಲಿ, ಹತ್ತಿ, ತೇಗ, ನಂದಿ, ಬೀಟೆ, ರಕ್ತಚಂದನ ಮತ್ತು ಶ್ರೀಗಂಧ ಸೇರಿದಂತೆ ವಿವಿಧ ಬಗೆಯ ಕಾಡುಮರಗಳನ್ನು ನೆಟ್ಟು ಬೆಳೆಸಲಾಗುತ್ತಿದೆ ಎಂದು ಡಾ.ಕೃಷ್ಣಮೂರ್ತಿ ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಲಿಂಗಣ್ಣಸ್ವಾಮಿ, ಉಪನ್ಯಾಸಕರಾದ ರಮೇಶ್, ಅನಂತು, ಚಂದ್ರಶೇಖರ್ ಸೇರಿದಂತೆ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ವನಮಹೋತ್ಸವದಲ್ಲಿ ಭಾಗವಹಿಸಿದ್ದರು.