ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ದಂಧೆಯಲ್ಲಿ ತೊಡಗಿರುವವರನ್ನು ಗುರುತಿಸಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು, ಚಿತ್ತಾಪುರ ತಾಲೂಕಿನ ಮುಡಬೂಳ ಬ್ಯಾರೇಜ್ ಹತ್ತಿರ ಕಾಗೀನಾ ನದಿಯಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವುದನ್ನು ಪರಿಶೀಲಿಸಿ ಮಾತನಾಡಿದರು. ಅಕ್ರಮವಾಗಿ ಮರಳು ಸಾಗಿಸಲು ಮುಖ್ಯ ರಸ್ತೆಯಿಂದ ನದಿಯ ದಡದವರೆಗೆ ನಿರ್ಮಿಸಿರುವ ರಸ್ತೆಯಲ್ಲಿ ದನಕರುಗಳು ಕುಡಿಯುವ ನೀರಿಗೆ ಹೋಗಲು ತೊಂದರೆಯಾಗದಂತೆ ವಾಹನಗಳು ಬರದಂತೆ ಎಲ್ಲ ಸಂಪರ್ಕ ರಸ್ತೆಗಳಿಗೆ ದಡದ ಹತ್ತಿದ ಗುಂಡಿ ತೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನದಿಪಾತ್ರದಲ್ಲಿ ರಸ್ತೆಗಳನ್ನು ನಿರ್ಮಿಸಿ ವ್ಯವಸ್ಥಿತವಾಗಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ. ಈ ದಂಧೆಯಲ್ಲಿ ನದಿ ದಡದ ಅಕ್ಕಪಕ್ಕದ ಗ್ರಾಮಸ್ಥರು ಭಾಗಿಯಾಗಿರುತ್ತಾರೆ. ಅವರಿಂದ ಸೂಕ್ತ ಮಾಹಿತಿ ಪಡೆದು ಅಕ್ರಮ ಮರಳು ದಂಧೆ ನಡೆಸುವ ಮುಖ್ಯಸ್ಥರನ್ನು ಗುರುತಿಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಇಲಾಖೆಯವರು ಪದೇ ಪದೇ ಆಕಸ್ಮಿಕವಾಗಿ ದಾಳಿ ಮಾಡುವ ಮೂಲಕ ಅಕ್ರಮವಾಗಿ ಮರಳು ಸಾಗಿಸುವ ಹಾಗೂ ಮರಳು ತೆಗೆಯುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.
ಚಿತ್ತಾಪುರ ತಾಲೂಕಿನ ಕುಂದನೂರ ಮರಳು ನಿಕ್ಷೇಪ ಹರಾಜಾಗಿದ್ದು, ದಂಡೋತಿ ಮತ್ತು ಮುತ್ತಗಾ ಮರಳು ನಿಕ್ಷೇಪಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆದಿದೆ. ಈ ಮರಳು ನಿಕ್ಷೇಪಗಳಿಂದ ಅಕ್ರಮವಾಗಿ ಮರಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾವಹಿಸಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದರು.