ಸಾಲ ವಸೂಲಿಗಾಗಿ ಖಾಸಗಿ ಬ್ಯಾಂಕ್ ಸಿಬ್ಬಂದಿ ರೈತರಿಗೆ ಧಮಕಿ ಹಾಕುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಈವತ್ತೂ ಸಹ ಇದೇ ರೀತಿ ಧಮಕಿ ಹಾಕಿದ ಪ್ರಕರಣ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದ ಮಹಿಳೆಯ ಬಳಿ ಸಾಲ ವಸೂಲಿ ಮಾಡಲು ಬಂದ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬ ರಸ್ತೆ ಮಧ್ಯದಲ್ಲಿ ನಿಲ್ಲಿಸಿಕೊಂಡು ತೀವ್ರ ಒತ್ತಡ ಹೇರಿರುವ ವಿಡಿಯೋ ಲಭ್ಯವಾಗಿದೆ.ಸಾಲ ಹಿಂತಿರುಗಿಸಲು ಗಡುವು ಕೇಳಿದ ಮಹಿಳೆ ವಿರುದ್ದ ಹರಿಹಾಯ್ದಿದ್ದಾನೆ.ನೀನು ಸತ್ತೋದ್ರೆ ಸಾಲ ಮನ್ನಾ ಆಗುತ್ತೆ ಸಾಯಿ ಎಂದು ಧಮ್ಕಿ ಹಾಕಿ ಸಾಲ ವಸೂಲಿಗೆ ನಿಂತಿದ್ದಾನೆ. ಕೇವಲ 500 ರೂ. ಕಂತಿಗಾಗಿ ಮಹಿಳೆಗೆ ಸಾಯುವಂತೆ ಧಮ್ಕಿ ಹಾಕಿದ್ದಾನೆ.ಒಂದು ವಾರದ ಗಡುವು ಕೇಳಿದ್ರೂ ಪಟ್ಟು ಬಿಡದೆ ಸಾಲ ವಸೂಲಿಗೆ ಒತ್ತಡ ಹೇರಿದ್ದಾನೆ.
ಹುಣಸೂರಿನ IDFC ಬ್ಯಾಂಕ್ ಸಿಬ್ಬಂದಿ ಸುರೇಶ್ ಹೀಗೆ ದುರ್ವರ್ತನೆ ತೋರಿರುವ ವ್ಯಕ್ತಿ.ವಾರದ ಕಂತಿನಲ್ಲಿ ಲತಾ ಎಂಬ ರೈತ ಮಹಿಳೆ IDFC ಬ್ಯಾಂಕ್ ನಲ್ಲಿ 50 ಸಾವಿರ ಸಾಲ ಪಡೆದಿದ್ದಾರೆ. .ವಾರಕ್ಕೆ 500 ರೂ ನಂತೆ ಕಂತು ಪಾವತಿಸುವ ಸಾಲ ಪಡೆದ ಮಹಿಳೆ ಕೆಲವು ಕಂತುಗಳನ್ನ ಕಟ್ಟಿಲ್ಲ. ಇದಕ್ಕಾಗಿ ನಡು ರಸ್ತೆಯಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಸಾಲ ವಸೂಲಿಗೆ ನಿಂತಿದ್ದಾನೆ. ದಾರಿಯಲ್ಲಿ ಹಣ ಬಿಸಾಕು ತಗೊಂಡು ಹೋಗ್ತೀನಿ ಅಂತ ದಬ್ಬಾಳಿಕೆಯಿಂದ ವರ್ತಿಸಿದ್ದಾನೆ. ಸ್ಥಳೀಯರೊಬ್ಬರು ಮಾನವೀಯತೆ ದೃಷ್ಟಿಯಿಂದ ಪ್ರಶ್ನಿಸಿದರೂ ಉಡಾಫೆಯಿಂದ ಉತ್ತರಿಸಿದ ಸಿಬ್ಬಂದಿ ಸಾಲದ ಕಂತಿಗಾಗಿ ಪಟ್ಟು ಹಿಡಿದಿದ್ದಾನೆ.
ಸಾಲ ವಸೂಲಿ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡಬಾರದೆಂದು ಸರ್ಕಾರ ಸೂಚನೆ ನೀಡಿದೆ.ಹೀಗಿದ್ದರೂ ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪದಿಂದಲೇ ಸಾಲ ವಸೂಲಿಗೆ ನಿಂತಿರುವುದು ಶೋಚನೀಯ.