ಶಿಸ್ತು ಇಲ್ಲದೇ ಇದ್ರೆ ಮಗನಾದ್ರೇನು, ಮೊಮ್ಮಗನಾದ್ರೇನು?. ಶಿಸ್ತುಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗ ಪ್ರಜ್ವಲ್ ವಿರುದ್ಧ ಗುಡುಗಿದ್ದಾರೆ.
ಪದ್ಮನಾಭ ನಗರದ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಾಯಿಸಿ ಮಾತನಾಡಿದ್ರೆ ಪಕ್ಷದ ಟಿಕೆಟ್ ಕೊಡ್ತಾರಾ? ಪ್ರಜ್ವಲ್ ಹಿಂದೆ ಮುಂದೆ ಓಡಾಡಿಕೊಂಡಿರುವವರು ಸರಿಯಿಲ್ಲ ಅವರಲ್ಲಿ ಕೆಲವರ ಉದ್ದೇಶ ಬೇರೆಯಿದ್ದಂತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಪ್ರಜ್ವಲ್ ಹೇಳಿದ ಸೂಟ್‌ಕೇಸ್ ಸಂಸ್ಕ್ರತಿ ಹೇಳಿಕೆ ಸರಿಯಿಲ್ಲ. ಈ ಮಾತನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೇರೆಯವರು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಯಾವ ಕಾರಣಕ್ಕೂ ಪಕ್ಷದಿಂದಾಗಿ ಕುಟುಂಬ ಒಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭವಾನಿ, ಅನಿತಾ ಇಬ್ಬರೂ ಚುನಾವಣೆಗೆ ನಿಲ್ಲಬಹುದು. ಆದ್ರೆ ಉಳಿದ ನಮ್ಮ ಕುಟುಂಬದ ಬೇರೆ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣನಿಗೆ ಖಡಕ್ ಎಚ್ಚರಿಕೆ ನೀಡಿದ ಗೌಡರು, ಇನ್ಮುಂದೆ ಇಂತಹ ಹೇಳಿಕೆಗಳು ಪುನರಾವರ್ತನೆಯಾದಲ್ಲಿ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಬಡ್ಡಿಗೆ ಹಣ ತಂದು ಚುನಾವಣೆ ನಡೆಸಿದ್ದೇವೆ. ಸೂಟ್‌ಕೇಸ್ ಸಂಸ್ಕ್ರತಿ ನಮ್ಮದಾಗಿದ್ದಲ್ಲಿ ಬಡ್ಡಿಗೆ ಹಣ ತರುವ ಅಗತ್ಯವಿರುತ್ತಿರಲಿಲ್ಲ. ಸತ್ಯಸಂಗತಿಯನ್ನು ಅರಿತು ಪ್ರಜ್ವಲ್ ಹೇಳಿಕೆ ನೀಡಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಾಕೀತು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.