ಬೆಂಗಳೂರು: ಮಳೆಯ ಅಭಾವ, ಭೀಕರ ಬರ ಮತ್ತು ಬಿಸಿಲಿನ ತೀವ್ರತೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25 ಕ್ಕಿಂತಲೂ ಕಡಿಮೆಯಾಗಿದೆ. ಇನ್ನೂ ಮಳೆಯಾಗದಿದ್ದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೀರಿಗೆ ಹಾಹಾಕಾರ ಹೆಚ್ಚಲಿದೆ.
ರಾಜ್ಯದ 14 ಪ್ರಮುಖ ಜಲಾಶಯಗಳು ಈಗ 217.75 ಟಿಎಂಸಿ ಅಡಿ ನೀರನ್ನು ಹೊಂದಿವೆ. ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ಅಡಿ. ಹಾಗಾಗಿ ಈಗಿನ ಸಂಗ್ರಹ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25ಕ್ಕಿಂತ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಇದೇ ಅವಧಿಯಲ್ಲಿ ರಾಜ್ಯದ ಜಲಾಶಯಗಳಲ್ಲಿ 269 ಟಿಎಂಸಿ ಅಡಿ ನೀರು ಇತ್ತು. ತುಂಗಭದ್ರೆಯಲ್ಲಿ 105.79 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ 3.77 ಟಿಎಂಸಿ ಅಡಿ ನೀರು ಇದೆ. ಕೆಆರ್ಎಸ್ ಮತ್ತು ಕಬಿನಿಯಲ್ಲಿ ಕ್ರಮವಾಗಿ 11.74 ಟಿಎಂಸಿ ಅಡಿ ಮತ್ತು 7.72 ಟಿಎಂಸಿ ಅಡಿ ನೀರು ಇದೆ. ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯ ಕ್ರಮವಾಗಿ 49.45 ಟಿಎಂಸಿ ಅಡಿ ಮತ್ತು 19.52 ಟಿಎಂಸಿ ಅಡಿ ಆಗಿದೆ.
ಈ ವರ್ಷ ಒಮ್ಮೆ ಮಾತ್ರ ಜಲಾಶಯಗಳು ಭರ್ತಿಯಾಗಿದ್ದವು. ಅಲ್ಲದೆ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಈ ಎಲ್ಲಾ ಅಂಶಗಳು ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ.
ಬಿಸಿಲಿನ ಬೇಗೆಯಿಂದ ಆವಿಯಾಗುವಿಕೆಯ ಮೂಲಕವೂ ನೀರು ನಷ್ಟವಾಗುತ್ತದೆ. ಈ ಬಾರಿ ಬಿರು ಬೇಸಿಗೆಯಿಂದಾಗಿ ನಷ್ಟವೇ ಹೆಚ್ಚು. ಕರ್ನಾಟಕವು ಏಪ್ರಿಲ್‌ನಲ್ಲಿ ಸುಮಾರು 50 ಮಿಮೀ ಮಳೆಯನ್ನು ಪಡೆಯುತ್ತದೆ. ಆದರೆ ಆವಿಯಾಗುವಿಕೆಯಿಂದ ದಿನಕ್ಕೆ ಸುಮಾರು 5 ಮಿಮೀ ನಷ್ಟವಾಗುತ್ತದೆ. ಇದರರ್ಥ ತಿಂಗಳಿಗೆ 150 ಮಿಮೀ ನೀರು ನಷ್ಟವಾಗಿದೆ.<>