ಇಲ್ಲಿಯವರೆಗೂ ಕಾಂಗ್ರೆಸ್ ಸರಕಾರ ಹೆಂಡ ಹಂಚುವ ಮೂಲಕ ಮತ ಪಡೆಯುತ್ತಿದೆ, ಆದರೆ, ನಾವು ಹಣ, ಹೆಂಡ ನೀಡಿ ಮತ ಪಡೆಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಶೋಷಿತ ಸಮುದಾಯಗಳಿಗೆ ಹೆಚ್ಚು ನೆರವು ನೀಡಲಾಗುತ್ತೆ ಎಂದು ವಿಧಾನ ಪರಿಷತ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ನಮ್ಮ ಮಧ್ಯ ಸಣ್ಣಪುಟ್ಟ ಕಲಹಗಳು ಉಂಟಾಗುತ್ತಲೇ ಇರುತ್ತೆ. ಆದರೆ, ಸದ್ಯದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತೆ. ಸಮಾಜದಲ್ಲಿ ತುಳಿತಕ್ಕೊಳಗಾದವರಿಗಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕೆಲಸ ಮಾಡುತ್ತದೆ ಎಂದು ಹೇಳಿದರು.
ಮೊನ್ನೆ ಕಾಶ್ಮೀರದ ಉರಿ ಪ್ರದೇಶದಲ್ಲಿ ಉಗ್ರರು ದಾಳಿ ಮಾಡುವ ಮೂಲಕ ನಮ್ಮ ಸೈನಿಕರನ್ನು ಹತ್ತೆ ಮಾಡಿದ್ದರು. ಇದ್ದಕ್ಕೆ ಪ್ರತೀಕಾರವಾಗಿ ಪ್ರಧಾನಿ ಮೋದಿ ಸರಕಾರದ ಮಾರ್ಗದರ್ಶನದಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 38 ಕ್ಕೂ ಹೆಚ್ಚು ಉಗ್ರರನ್ನು ಚೆಂಡಾಡಿದ್ದಾರೆ. ವಿಶ್ವದ ಪಾಲಿಗೆ ಸೆಪ್ಟೆಂಬರ್ 29 ಮಹತ್ವದ ದಿನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ