Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜನಾರ್ದನ ರೆಡ್ಡಿ ಪುತ್ರಿಯ ವಿವಾಹಕ್ಕೆ ಹಾಜರಾಗುತ್ತೇನೆ: ಯಡಿಯೂರಪ್ಪ

ಜನಾರ್ದನ ರೆಡ್ಡಿ ಪುತ್ರಿಯ ವಿವಾಹಕ್ಕೆ ಹಾಜರಾಗುತ್ತೇನೆ: ಯಡಿಯೂರಪ್ಪ
ಬೆಂಗಳೂರು , ಮಂಗಳವಾರ, 15 ನವೆಂಬರ್ 2016 (14:49 IST)
ಕಪ್ಪು ಹಣದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರ ಸಾರಿದ್ದರೂ ಕಪ್ಪು ಹಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ವಿವಾಹಕ್ಕೆ ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಾಗುತ್ತಿರುವುದು ಬಿಜೆಪಿಯಲ್ಲಿ ಅಂತರಿಕ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
 
ಕಪ್ಪು ಹಣ ಹೊಂದಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹಕ್ಕೆ ಹಾಜರಾಗಬಾರದು ಎಂದು ಬಿಜೆಪಿ ಹೈಕಮಾಂಡ್ ಆದೇಶ ನೀಡಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಾನು ವಿವಾಹಕ್ಕೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
 
ಬಿಜೆಪಿ ಹೈಕಮಾಂಡ್, ಮಾಜಿ ಸಚಿವ ರೆಡ್ಡಿ ಪುತ್ರಿಯ ವಿವಾಹಕ್ಕೆ ಹಾಜರಾಗದಂತೆ ಆದೇಶ ನೀಡಿದೆ ಎನ್ನುವ ವರದಿಗಳು ಆಧಾರರಹಿತವಾಗಿದೆ. ನನಗೆ ರೆಡ್ಡಿಯವರು ಆಹ್ವಾನ ನೀಡಿದ್ದು, ವಿವಾಹಕ್ಕೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
 
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯ ಪ್ರಮುಖ ನಾಯಕರಾಗಿರುವುದರಿಂದ ಬಿಜೆಪಿ ಪಕ್ಷದ ಮುಖಂಡರು ವಿವಾಹಕ್ಕೆ ಹಾಜರಾದಲ್ಲಿ ತಪ್ಪಿಲ್ಲ ಎಂದು ಬಳ್ಳಾರಿ ಬಿಜೆಪಿ ಘಟಕದ ಅಧ್ಯಕ್ಷ ಎಸ್. ಗುರುಲಿಂಗನಗೌಡ ಹೇಳಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣದ ವಿರುದ್ಧ ಸಮರ ಸಾರಿರುವಾಗ, ಕಪ್ಪು ಹಣದ ಆರೋಪದ ಮೇಲೆ ಬಂಧಿತನಾಗಿದ್ದ ಮಾಜಿ ಸಚಿವ ರೆಡ್ಡಿ ವಿವಾಹಕ್ಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಆದರೆ, ಕೆಲವರು ರಾಜಕೀಯ ಅನಿವಾರ್ಯಗಳಿಂದಾಗಿ ವಿವಾಹಕ್ಕೆ ಹಾಜರಾಗುತ್ತಿದ್ದಾರೆ ಎಂದು ಅನಾಮಧೇಯರಾಗಿರಲು ಬಯಸಿರುವ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
 
ತಲಾ 10 ಸಾವಿರ ರೂ ಬೆಲೆಬಾಳುವ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದ್ದ ಮಾಜಿ ಸಚಿವ ರೆಡ್ಡಿ, ದೇಶಾದ್ಯಂತ ಪ್ರಮುಖ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು. ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಸದಾನಂದಗೌಡರಿಗೂ ಪುತ್ರಿಯ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ.   
 
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಆಹ್ವಾನ ನೀಡಲಾಗಿದ್ದರೂ ವಿವಾಹಕ್ಕೆ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
 
ಸ್ವಾಭಿಮಾನ, ಮಾನ, ಮರ್ಯಾದೆ ಇರುವಂತಹ ಯಾವೊಬ್ಬ ರಾಜಕೀಯ ನಾಯಕರು ರೆಡ್ಡಿಯವರ ಪುತ್ರಿಯ ವಿವಾಹಕ್ಕೆ ಹಾಜರಾಗುವುದಿಲ್ಲ ಎಂದು ಸಚಿವ ಕೆ.ರಮೇಶ್ ಕುಮಾರ್ ಈಗಾಗಲೇ ಹೇಳಿಕೆ ನೀಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಿಂದ ಕಪ್ಪು ಹಣವನ್ನು ನಿರ್ಮೂಲನೆಗೊಳಿಸುವುದಾಗಿ ಗುಡುಗುತ್ತಾರೆ. ಮತ್ತೊಂದೆಡೆ ಕಪ್ಪು ಹಣ ಬಳಸುತ್ತಿರುವ ಬಿಜೆಪಿ ಮುಖಂಡ ರೆಡ್ಡಿ ಪುತ್ರಿಯ ವಿವಾಹಕ್ಕೆ ಬಿಜೆಪಿ ಮುಖಂಡರು ಹಾಜರಾಗುವುದು ಅವರ ಇಬ್ಬಗೆಯ ನಿಲುವು ಬಹಿರಂಗವಾಗಿದೆ ಎಂದು ಸಚಿವ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.  
 
ನಾಲ್ಕು ವರ್ಷಗಳ ಜೈಲು ವಾಸ ಅನುಭವಿಸಿದ ಮಾಜಿ ಸಚಿವ ರೆಡ್ಡಿ, 2015ರ ಜನೆವರಿ ತಿಂಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದು, 12 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹತ್ತಿರದಲ್ಲಿ ಯಾವ ಎಟಿಎಂನಲ್ಲಿ ಹಣ ಬರುತ್ತಿದೆ ತಿಳಿಯಬೇಕೆ?