ಬೆಂಗಳೂರು: ಅ. 11ರಿಂದ 16ರವರೆಗೆ ಕಲಬುರಗಿ ಹಾಗೂ ಧಾರವಾಡ ಪೀಠ ಸೇರಿ ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠಕ್ಕೂ ಒಂದು ವಾರ ದಸರಾ ರಜೆ ನೀಡಲಾಗಿದೆ.
ಹೈಕೋರ್ಟ್ನ ಹಂಗಾಮಿ ಸಿಜೆ ಎಸ್ ಸಿ ಶರ್ಮಾ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಈ ಕುರಿತು ನೋಟಿಫಿಕೇಶನ್ ಹೊರಡಿಸಿದ್ದಾರೆ. ಅದರಂತೆ, ಹೈಕೋರ್ಟ್ನ ಎಲ್ಲ ಪೀಠಗಳಿಗೆ ಒಂದು ವಾರ ದಸರಾ ರಜೆ ನೀಡಲಾಗಿದೆ.
ಈ ಅವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ, ಮೇಲ್ಮನವಿ ಸ್ವೀಕರಿಸುವುದಿಲ್ಲ. ಹಾಗಿದ್ದೂ, ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡೆಯಾಜ್ಞೆ ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.