ಶಿಕ್ಷಕರು ಹಾಗೂ ಅಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ನೂರಾರು ಮಕ್ಕಳು ಬೇಲ್ ಪುರಿ, ತರಕಾರಿ ಮಾರಾಟ ಮಾಡಿದ ಘಟನೆ ನಡೆದಿದೆ.
ಇದು ನಿಜವಾಗಿ ನಡೆದ ಘಟನೆ. ಮಂಡ್ಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆಯ ಸಂಭ್ರಮ ಮನೆ ಮಾಡಿತ್ತು.
ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಮಕ್ಕಳ ಸಂತೆ ಇದಾಗಿತ್ತು. ಸಡಗರ ಸಂಭ್ರಮದಿಂದ ಸಂತೆಯಲ್ಲಿ ಭಾಗವಹಿಸಿ ವ್ಯಾಪಾರ ವ್ಯವಹಾರ ಮಾಡಿದ ಮಕ್ಕಳು ಗಮನ ಸೆಳೆದರು.
ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ವ್ಯಾಪಾರ, ವ್ಯವಹಾರ ಜೋರಾಗಿತ್ತು.
ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ವ್ಯಾಪಾರಿಗಳು ನಾಚುವಂತೆ ಪೈಪೋಟಿಯ ಮೇಲೆ ವ್ಯಾಪಾರ ಮಾಡಿ ಗಮನ ಸೆಳೆದರು.
ಅಣ್ಣಾ ಬನ್ನಿ. ಅಕ್ಕಾ ಬನ್ನೀ ಅಕ್ಕ ನಮ್ಮತ್ರ ಒಳ್ಳೊಳ್ಳೆ ತರಕಾರಿ ಇದೆ ಬನ್ನಿ. ಸೊಪ್ಪು ಒಂದು ಕಂತೆಗೆ ಹತ್ತೇ ರೂಪಾಯಿ ಬನ್ನಿ. ಬೇಲ್ ಪುರಿ, ಚುರುಮುರಿ ತಗೊಳ್ಳಿ ಅದೂ ಹತ್ತೇ ರೂಪಾಯಿ, ಸೇವಂತಿಗೆ ಹೂವನ್ನು ತಗೊಳ್ಳಿ ಮಾರು ಹತ್ತೇ ರೂಪಾಯಿ ಎಂದು ಗ್ರಾಹಕರನ್ನು ಸೆಳೆದು ವ್ಯಾಪಾರ ಮಾಡುತ್ತಿದ್ದುದು ಕಂಡು ಬಂತು.
ಮಕ್ಕಳ ಸಂತೆಯನ್ನು ಉದ್ಘಾಟಿಸಿದ ಸಂತೆವ್ಯಾಪಾರಿ ರೈತಮಹಿಳೆ ಸುಬ್ಬಮ್ಮ ಮಕ್ಕಳಿಂದ ವಿವಿಧ ವಸ್ತುಗಳನ್ನು ಖರೀದಿಸಿದರು.