ಬೆಂಗಳೂರು: ಮಹಾನಗರದಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಓರ್ವ ಯುವತಿ ಸೇರಿ ಮುತ್ತು, ಪೆದ್ದರೆಡ್ಡಿ, ದಾಮೋದರ್ ಬಂಧಿತ ಆರೋಪಿಗಳು.
ಶಿವರುದ್ರಯ್ಯ ಎಂಬ ನಿವೃತ್ತ ಪ್ರಾಂಶುಪಾಲರು ಬಾರ್ ಲೈಸೆನ್ಸ್ ಪಡೆದುಕೊಳ್ಳಲು ಹುಡುಕಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ಹನಿಟ್ರ್ಯಾಪ್ ಗ್ಯಾಂಗ್ನ ಯುವತಿ ಪರಿಚಯವಾಗಿತ್ತು. ತನ್ನ ಪರಿಚಯದವರ ಬಳಿ ಬಾರ್ ಲೈಸೆನ್ಸ್ ಇದೆ ಎಂದೇಳಿ ಸ್ನೇಹ ಬೆಳಸಿ ಪ್ಲಾನ್ ರೂಪಿಸಿದ್ದರು. ಬಳಿಕ ಬಾರ್ ಲೈಸೆನ್ಸ್ ವಿಚಾರವಾಗಿ ಮಾತುಕತೆ ನಡೆಸಲು ಯುವತಿ ಶಿವರುದ್ರಯ್ಯರನ್ನು ಮನೆಗೆ ಕರೆಸಿಕೊಂಡಿದ್ದಳು. ಯುವತಿ ಜೊತೆ ಮಾತಾಡುತ್ತಿದ್ದಾಗ ಗ್ಯಾಂಗ್ನಲ್ಲಿದ್ದ ಇನ್ನಿತರ ಆರೋಪಿಗಳು ಮನೆ ಒಳಗೆ ನುಗ್ಗಿದ್ದರು. ಈ ವೇಳೆ ನಕಲಿ ಪ್ರೆಸ್ ಕಾರ್ಡ್ ತೋರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟು ಪ್ರಾಂಶುಪಾಲರಿಂದ ಆರೋಪಿಗಳು 3 ಲಕ್ಷ ರೂ. ಹಣ ಪಡೆದಿದ್ದಾರೆ. ನಂತರ ಉಳಿದ ಹಣಕ್ಕಾಗಿ ಗ್ಯಾಂಗ್ ಒತ್ತಾಯಿಸಿತ್ತು.
ಇದರಿಂದ ಬೇಸತ್ತ ಶಿವರುದ್ರಯ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಹನಿ ಟ್ರ್ಯಾಪ್ ಮಾಡಿರುವುದಾಗಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಖಾಕಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ.