ಜೇನು ಕೃಷಿಯ ಜನಪ್ರಿಯತೆಯಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸುತ್ತಿದೆ ಜೇನಿನ ಝೇಂಕಾರ. ಸ್ನೇಹಿತನ ಹೊಲದಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಪರಾಗ ಸ್ಪರ್ಷದಿಂದಾಗಿ ಸ್ನೇಹಿತನ ಹೊಲದ ಸೂರ್ಯಕಾಂತಿ ಬೆಳೆಯಲ್ಲಿ ಶೇ.35ಕ್ಕಿಂತ ಅಧಿಕ ಇಳುವರಿಯನ್ನು ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಡಂಬ್ರಳ್ಳಿಯ ಗ್ರಾಮದ ಜೇನು ಕೃಷಿಕ ಆನಂದರಡ್ಡಿ ಅವರು ಜೇನು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.
ಜೇನು ಎಂದೊಡನೆ ಎಲ್ಲರಿಗೂ ಬಾಯಲ್ಲಿ ನೀರೂರುವುದು ಸಹಜ. ಆದರೆ ಜೇನು ಸಾಕಾಣಿಕೆ ಎಂದೊಡನೆ ದೂರ ಸರಿಯುವವರೆ ಬಹಳ. ಹೀಗಿರುವಾಗ ಜೇನು ಕೃಷಿ ಮಾಡಿ ಅದರ ಲಾಭ ಪಡೆಯುವವರು ಬಹಳ ವಿರಳ. ಇದಕ್ಕೆ ಅಪವಾದವೆಂಬಂತೆ ಕೊಪ್ಪಳ ಜಿಲ್ಲೆಯ ಕೆಲ ರೈತರು ಜೇನುಕೃಷಿ ಮಾಡಿ ಅದರ ಲಾಭ ಪಡೆಯುತ್ತಿದ್ದಾರೆ. ಕೊಪ್ಪಳ ತಾಲೂಕಿನ ಡಂಬ್ರಳ್ಳಿಯ ಪ್ರಗತಿಪರ ರೈತ ಆನಂದರಡ್ಡಿ ಇಂತಹ ಒಬ್ಬ ಅಪರೂಪದ ರೈತ. ಹತ್ತಾರು ಜೇನು ಪೆಟ್ಟಿಗೆಗಳನ್ನಿಟ್ಟು ಸಲಹುತ್ತ ಅದನ್ನು ತನ್ನ ಸ್ನೇಹಿತರ ಹೊಲಗಳಲ್ಲಿಟ್ಟು ತಾವೇ ಅವುಗಳನ್ನು ಸಲುಹಿ ಆ ರೈತರಿಗೆ ಜೇನಿನ ಮಹತ್ವ ಮತ್ತು ಅವುಗಳ ಪರಾಗ ಸ್ಪರ್ಶದಿಂದ ಆಗುವ ಲಾಭವನ್ನು ಪರಿಚಯಿಸುತ್ತಿರುವುದು ಅವರ ಹೆಗ್ಗಳಿಕೆ.
ಜೇನು ಕೃಷಿಕ ಆನಂದರಡ್ಡಿ ಅವರು ಇತ್ತೀಚೆಗೆ ತಮ್ಮ ಜೇನು ಪೆಟ್ಟಿಗೆಗಳನ್ನು ತಮ್ಮ ಸ್ನೇಹಿತ ಭೂಮರೆಡ್ಡಿಯವರ ಸೂರ್ಯಕಾಂತಿ ಹೊಲದಲ್ಲಿ ಇರಿಸಿದಾಗ ಅದರ ಇಳುವರಿ ಶೇ.35ಕ್ಕಿಂತ ಅಧಿಕವಾಗಿರುವುದು ಕಂಡುಬಂದಿದೆ. ಅಲ್ಲದೇ ಸುತ್ತಲಿನ ಇನ್ನೂ 4-5 ರೈತರು ಈ ಜೇನು ಪರಾಗ ಸ್ಪರ್ಷದ ಫಲಾನುಭವಿಗಳಾಗಿದ್ದಾರೆ. ಸೂರ್ಯಕಾಂತಿ ಕಟಾವಿಗೆ ಬಂದಿರುವುದರಿಂದ ಈಗ ತಮ್ಮದೇ ಬಾಳೆ ಹೊಲಕ್ಕೆ ಪೆಟ್ಟಿಗೆಗಳನ್ನು ವರ್ಗಾಯಿಸಿರುವುದು ಈಗಲೂ ಕಾಣಲು ಸಿಗುತ್ತದೆ.