ವಿಧಾನಸಭೆ ಚುನಾವಣೆಯಷ್ಟೇ ಮಹತ್ವ ಪಡೆದುಕೊಂಡಿರುವ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ದಿನದಿಂದ ದಿನಕ್ಕೆ ಕಾವೆರುತ್ತಿದೆ. ಸಂಸ್ಥೆಯ ಅಧಿಕಾರ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಭಾರಿ ತುರುಸಿನಿಂದ ಕೂಡಿರುವ ಸಂಸ್ಥೆಯ ಅಧಿಕಾರದ ಗದ್ದುಗೆ ಯಾರಿಗೆ ಒಲಿಯಲಿದೆ ಎನ್ನೋದು ತೀವ್ರ ಕುತೂಹಲ ಮೂಡಿಸಿದೆ.
ತೊಗರಿ ನಾಡು ಖ್ಯಾತಿಯ ಕಲಬುರಗಿಯ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಚುನಾವಣೆ ಚುನಾವಣೆ ಕಣ ರಂಗೇರಿದೆ. ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಶಾಲೆ ಕಾಲೇಜು, ಮೆಡಿಕಲ್ ಕಾಲೇಜು, ಇಂಜನೀಯರಿಂಗ್ ಕಾಲೇಜುಗಳನ್ನು ಹೊಂದಿರುವ ಹೈಕ ಆಡಳಿತ ಮಂಡಳಿ ಚುನಾವಣೆಗೆ ಈ ಬಾರಿ ಭಾರಿ ಪೈಪೋಟಿ ಏರ್ಪಟ್ಟಿದೆ. ಪ್ರತಿವರ್ಷ ನೂರಾರು ಕೋಟಿ ರೂಪಾಯಿ ವ್ಯವಹಾರ ಹೊಂದಿರುವ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಈ ಬಾಗದಲ್ಲಿ ವಿಧಾನಸಭೆ ಚುನಾವಣೆಗಿಂತ ಹೆಚ್ಚಾಗಿ ಮಹತ್ವವನ್ನು ಪಡೆದುಕೊಂಡಿದೆ. ಈ ಬಾರಿ ಎರಡು ಪೆನಲ್ ಗಳಿದ್ದು ಒಂದು ಡಾ. ಭೀಮಾಶಂಕರ್ ಬಿಲಗುಂದಿ ಪ್ಯಾನಲ್ ಇನ್ನೊಂದು ಹಾಲಿ ಅಧ್ಯಕ್ಷ್ಯರಾಗಿರುವ ಬಸವರಾಜ್ ಭೀಮಳ್ಳಿ ಪ್ಯಾನಲ್ ಗಳಿವೆ. ಅದ್ರಲ್ಲಿ ಒಂದೊಂದು ಪ್ಯಾನೆಲ್ ನಲ್ಲಿಯೂ 15 ಅಭ್ಯರ್ಥಿಗಳಿದ್ದು ಎರಡು ಪ್ಯಾನಲ್ ಗಳು ಗೆಲ್ಲಲು ಜಿದ್ದಾಜಿದ್ದಿನ ಹೋರಾಟ ನಡೆಸಿವೆ. ಹದಿಮೂರನೇ ಆಡಳಿತ ಮಂಡಳಿ ಸದಸ್ಯರು, ಒಂದು ಅಧ್ಯಕ್ಷ್ಯ, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಎರಡೂ ಪೆನಲ್ ಗಳ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಹೈದರಾಬಾದ ಕರ್ನಾಟಕದಲ್ಲಿನ ಎಲ್ಲಾ ಜಿಲ್ಲೆಗಳು ಸೇರಿ ಒಟ್ಟು 1650 ಮತಗಳಿದ್ದು ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ ಹೇಗಾದ್ರು ಮಾಡಿ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಹತ್ತಾರು ರೀತಿಯ ಸರ್ಕಸ್ ಮಾಡ್ತಿದ್ದಾರೆ. ಮತದಾರರಿಗೆ ಆಸೆ- ಆಮಿಷಗಳನ್ನು ತೋರಿಸುತ್ತಿದ್ದಾರೆ. ಹಲವು ಆಶ್ವಾಸನೆಗಳನ್ನು ನೀಡುತ್ತಾ ಮತದಾರರನ್ನು ತಮ್ಮತ್ತ ಸೆಳೆಯುವ ಪ್ಲ್ಯಾನ್ ನಡೆಸುತ್ತಿದ್ದಾರೆ. ಜೊತೆಗೆ ಒಬ್ಬರ ಮೇಲೊಬ್ಬರು ಗೂಬೆ ಕೂಡಿಸುವ ಪ್ರಯತ್ನದಲ್ಲಿ ತಲ್ಲಿನರಾಗಿದ್ದಾರೆ. ಇನ್ನು ಮತ್ತೆ ಮುಂದಿನ ಅವಧಿಗೆ ಅದೃಷ್ಟ ಪರೀಕ್ಷೆ ಇಳಿದಿರುವ ಹಾಲಿ ಹೈಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಭೀಮಳ್ಳಿ ಮಾಜಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಹೈಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿರುವ ಶಶೀಲ್ ಜಿ ನಮೋಶಿ ಅವರು ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಅವರ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿನ ಪಿಡಿಎ ಇಂಜನೀಯರಿಂಗ್ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಚುನಾವಣೆಗೆ ಮತದಾನ ನಡೆಯಲಿದೆ. ಮುಂಜಾನೆ ಎಂಟು ಗಂಟೆಯಿಂದ ಮತಧಾನ ನಡೆಯಲಿದ್ದು, ಸಂಜೆ ಐದು ಗಂಟೆವರಗೆ ಮತದಾನ ನಡೆಯಲಿದೆ. ನಾಡಿದ್ದು ಮತ ಎಣಿಕೆ ಕಾರ್ಯ ನಡೆಯಲಿದೆ. ಗೆಲ್ಲಲು ಬೇಕಾದ ಎಲ್ಲಾ ರೀತಿಯ ಕಸರತ್ತುಗಳನ್ನು ಮುಂದುವರಿಸಿದ್ದಾರೆ. ಆದ್ರೆ ಮತದಾರರು ಯಾರ ಕೈಹಿಡಿಯುತ್ತಾರೆ ಎನ್ನೋದು ಕುತುಹಲ ಕೆರಳಿಸಿದೆ.