ರಾಜ್ಯದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿರುವುದನ್ನು ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಿಹಾದಿ ಶಕ್ತಿಗಳ ಕೈಯಲ್ಲಿ ಇನ್ನೂ ಎಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಾಗಬೇಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಕೊಣಾಜೆಯಲ್ಲಿ ಹಿಂದುತ್ವ ವಿಚಾರಕ್ಕೆ ಕಾರ್ತಿಕ್‌ರಾಜ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆ ಜಿಹಾದಿಗಳು ರಾಜ್ಯದಲ್ಲಿ ನಡೆಸುತ್ತಿರುವ ರಾಜಕೀಯ ಹತ್ಯೆಯಾಗಿದೆ. ಜಿಹಾದಿ ಶಕ್ತಿಗಳ ಕೈಯಲ್ಲಿ ಇನ್ನೂ ಎಷ್ಟು ಹಿಂದೂ ಕಾರ್ಯಕರ್ತರ ಹತ್ಯೆಗಳಾಗುವವರೆಗೂ ನಿಮ್ಮ ಜಾಣ ಮೌನ ಮುಂದುವರೆಸುತ್ತೀರಿ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ಸರಣಿ ಹತ್ಯೆದ ಹಿಂದೆ ವ್ಯವಸ್ಥಿತ ಸಂಚಿದೆ. ಈ ಹತ್ಯೆಗಳು ಒಂದೇ ಮಾದರಿಯಲ್ಲಿ ಘಟಿಸುತ್ತಿವೆ. ಆದರೂ, ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಪ್ರಕರಣದ ಹಿಂದೆ ಒಂದೇ ಸಂಸ್ಥೆಗೆ ಸೇರಿದ ಶಕ್ತಿಗಳು ಶಾಮೀಲಾಗಿರುವಂತೆ ಕಾಣುತ್ತಿದೆ. ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳ ಹಿಂದೆ ಪಿಎಫ್‌ಐ ಸಂಘಟನೆಯ ಕೈವಾಡವಿರುವುದು ಸ್ಪಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ