ಸಾಂಸ್ಕೃತಿಕ ನಗರಿಯ ಸಂಚಾರಿ ದಟ್ಟಣೆಯನ್ನ ಕಡಿಮೆ ಮಾಡಲು ಪೊಲೀಸರು ಹೈ ಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು, ಪ್ರಮುಖ ರಸ್ತೆಗಳಲ್ಲಿರುವ ವಾಹನ ದಟ್ಟಣೆಯ ಬಗ್ಗೆ ಡಿಜಿಟಲ್ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಗಳ ಮೂಲಕ ಪ್ರದರ್ಶನ ಮಾಡಲಾಗುತ್ತದೆ.
ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿರುವ ಹಿನ್ನಲ್ಲೆಯಲ್ಲಿ ವಾಹನ ದಟ್ಟಣೆಯನ್ನ ನಿಯಂತ್ರಣ ಮಾಡಲು ಮೈಸೂರು ನಗರ ಸಂಚಾರಿ ಪೊಲೀಸರು ಹೈಟೆಕ್ ತಂತ್ರಜ್ಞಾನದ ಮೋರೆ ಹೋಗಿದ್ದಾರೆ. ನಗರದಲ್ಲಿ ಎಲ್ಲೆಲ್ಲಿ ವಾಹನ ಸಂಚಾರದ ದಟ್ಟಣೆ ಯಾವ ಸಮಯದಲ್ಲಿ ಹೆಚ್ಚಾಗಿರುತ್ತದೆ ಎಂಬ ಬಗ್ಗೆ ಈಗಾಗಲೇ ಸರ್ವೆ ಮಾಡಿರುವ ಪೊಲೀಸರು ಮತ್ತು ಅದಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ನಾಲ್ಕು ಡಿಜಿಟಲ್ ಬೋರ್ಡ್ ಗಳ ಅಳವಡಿಕೆ:
ದಸರಾ ಸಂಧರ್ಭದಲ್ಲಿ ಮೈಸೂರಿಗೆ ಪ್ರವಾಸಿಗರು ಸಂಜೆ ಸಮಯದಲ್ಲಿ ಕುಟುಂಬ ಸಮೇತ ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನ ನೋಡಲು ಬರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಕೆಲ ಸಮಯ ಟ್ರಾಫಿಕ್ ಜಾಮ್ ಆಗುವ ಸಮಸ್ಯೆ ಇರುತ್ತದೆ. ಈ ಹಿನ್ನಲ್ಲೆಯಲ್ಲಿ ದಸರಾ ಮುಗಿಯುವವರೆಗೂ ನಗರದ ಕೆಲವೊಂದು ರಸ್ತೆಗಳನ್ನ ಏಕ ಮುಖ ಸಂಚಾರ ಮಾಡುತ್ತಾರೆ. ಆದರೂ ಸಹ ವಾಹನ ದಟ್ಟಣೆ ಹೆಚ್ಚಾದರಿಂದ ಈ ಬಾರಿ ನಾಲ್ಕು ಡಿಜಿಟಲ್ ಬೋರ್ಡ್ ಗಳನ್ನ ನಗರದ ಕೋಟೆ ಆಂಜನೇಯ ದೇವಸ್ಥಾನ, ಬೆಂಗಳೂರು-ಮೈಸೂರು ರಿಂಗ್ ರೋಡ್, ಬಲ್ಲಾಳ್ ಸರ್ಕಲ್ ಮತ್ತು ನಂಜನಗೂಡು-ಮೈಸೂರು ಮುಖ್ಯರಸ್ತೆಯಲ್ಲಿ ಡಿಜಿಟಲ್ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಗಳನ್ನ ಅಳವಡಿಕೆ ಮಾಡಲಾಗಿದೆ.
ಇಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಕೆಲಸವೇನು?
ಇಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ ಗಳು ನಗರದಲ್ಲಿ ಪ್ರಸ್ತುತವಿರುವ ಹವಾಮಾನದ ಮಾಹಿತಿಯನ್ನು ನೀಡುತ್ತವೆ. ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಇರುವ ವಾಹನ ದಟ್ಟಣೆಯನ್ನ ಹೆಚ್ಚಾಗಿದೆ, ಕಡಿಮೆ ಇದೆ ಎಂದು ಬೋರ್ಡ್ ನಲ್ಲಿ ತಿಳಿಸುತ್ತದೆ.