ಬೆಂಗಳೂರು: ಭಾರತ ಈಗ ಅಭಿವೃದ್ಧಿಶೀಲ ರಾಷ್ಟ. ಇದು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಬಂಧ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಅನೇಕರು ಹೇಳುವುದನ್ನು ಕೇಳಿತ್ತಿದ್ದೇವೆ, ಇನ್ನೂ ಕೇಳುತ್ತಲೇ ಇದ್ದೇವೆ. ಹಾಗಾದರೆ, ಭಾರತ ಅಭಿವೃದ್ಧಿ ಹೊಂದಿದ ದೇಶ ಆಗುವುದು ಯಾವಾಗ? ಇದಕ್ಕೆ ಉತ್ತರ ಕಂಡುಕೊಳ್ಳುವುದು ಹೇಗೆ? ಅಂತ ನೋಡಿದಾಗ ಅದಕ್ಕೆ ಸ್ಪಷ್ಟ ಉತ್ತರ ʼಹೊಸ ರಾಷ್ಟ್ರೀಯ ಶಿಕ್ಷಣ ನೀತಿʼ ಎಂದು ನಾನು ನಿರ್ವಿವಾದವಾಗಿ ಹೇಳಬಲ್ಲೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ:
ದೇಶವನ್ನು ಸಮರ್ಥವಾಗಿ ಕಟ್ಟಿ ಬಲಿಷ್ಠವಾಗಿ ಮರು ರೂಪಿಸುವ ಶಕ್ತಿ ಇರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕೆಲವರು ರಾಜಕೀಯ ಮಾಡುತ್ತಿರುವ ಬಗ್ಗೆ ನನಗೆ ಬೇಸರವಿದೆ. ಇದು ಕೇವಲ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಎಂದು ನಾನು ಮತ್ತೆ ಮತ್ತೆ ಹೇಳಬಯಸುತ್ತೇನೆ ಎಂದು ಸಚಿವರು ಹೇಳಿದರು.
ಜ್ಞಾನ ಮತ್ತು ಕುಶಲತೆ ಎನ್ನುವುದು ಈಗ ಬಹಳ ಅಗತ್ಯ ಅಂಶಗಳು. ಜ್ಞಾನಕ್ಕೆ ಪೂರಕವಾಗಿ ಕುಶಲತೆಯೂ ಸೇರಿದರೆ ಅದ್ಭುತಗಳನ್ನೇ ಸೃಷ್ಟಿ ಮಾಡಬಹುದು. ಸರಕಾರ ಈ ದಿಕ್ಕಿನಲ್ಲಿಯೇ ಆಲೋಚನೆ ಮಾಡುತ್ತಿದೆ. ಕುಶಲತೆಯ ಕಲಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ಅವರು ನುಡಿದರು.
ಪ್ರತಿ ವಿದ್ಯಾರ್ಥಿ ಯಾವುದೇ ವಿಷಯ ಅಧ್ಯಯನ ಮಾಡಬೇಕಾದರೆ ಏತಕ್ಕಾಗಿ ಇದನ್ನು ಓದಬೇಕು? ಅದರಿಂದ ನನಗೇನು ಪ್ರಯೋಜನ ಎಂದು ಆಲೋಚನೆ ಮಾಡುತ್ತಾನೆ. ಹೀಗೆ ಚಿಂತಿಸುವ ಪ್ರತಿ ವಿದ್ಯಾರ್ಥಿಗೂ ತನ್ನ ನಿರ್ದಿಷ್ಟ ಗುರಿ ತಲುಪಲು, ತನ್ನದೇ ಶಕ್ತಿಯಿಂದ ಬದುಕು ರೂಪಿಸಿಕೊಳ್ಳಲು ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆ, ವೈಯಕ್ತಿಕ ನೆಲೆಗಟ್ಟಿನಲ್ಲಿ ಶುರುವಾಗುವ ಬದಲಾವಣೆ ಕ್ರಮೇಣ ದೇಶದ ಸಮಗ್ರ ಬದಲಾವಣೆಗೆ ಕಾಣಿಕೆ ನೀಡುತ್ತದೆ ಎಂದು ಸಚಿವರು ಪ್ರತಿಪಾದಿಸಿದರು.
ದಯಾನಂದ ಪೈ ಬೆಂಬಲ:
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಉದ್ಯಮಿ ಮತ್ತು ಶಿಕ್ಷಣ ತಜ್ಞ ಡಾ.ದಯಾನಂದ ಪೈ ಬೆಂಬಲ ವ್ಯಕ್ತಪಡಿಸಿದರು. ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ನೀತಿಯ ಬಗ್ಗೆ ಬಹಳ ಜನ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಕಾಲ ಕಾಲಕ್ಕೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿ ತರುತ್ತಲೇ ಇರಬೇಕು ಎಂದರು.
ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಇದೇ ಸಂದರ್ಭದಲ್ಲಿ ಪೈ ಅವರು ಉನ್ನತ ಶಿಕ್ಷಣ ಸಚಿವರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಅವರು ಶಿಕ್ಷಣ ನೀತಿಯ ಜಾರಿ ಬಗ್ಗೆ ಮಾತನಾಡಿದರು.
ಮೌಂಟ್ ಕಾರ್ಮೆಲ್ ಕಾಲೇಜು ಪ್ರಾಂಶುಪಾಲರಾದ ಡಾ.ಸಿಸ್ಟರ್ ಅರ್ಪಣಾ, ಕುಲಸಚಿವರಾದ ಕೆ.ಎನ್.ಶ್ರೀಧರ್, ಡಾ.ಬಿ.ರಮೇಶ್ ಮುಂತಾದವರು ಉಪಸ್ಥಿತರಿದ್ದರು.