ಕಾಂಗ್ರೆಸ್ ಹಾಗೂ ಜೆಡಿಎಸ್ ನ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಲಲಿತವಾಗಿ ಸರಕಾರ ಮುನ್ನಡೆಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದೆ.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಪಸ್ವರಕ್ಕೆ ಆಸ್ಪದ ನೀಡದಂತೆ ಉಭಯ ಪಕ್ಷಗಳ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಯಾವುದೇ ರೀತಿಯ ಆಪತ್ತು ಬರದಂತೆ ಸಂಭಾಳಿಸುವ ಜವಾಬ್ದಾರಿಯನ್ನು ಪ್ರಭಾವಿ ಸಚಿವರೆಂದೇ ಗುರುತಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಅವರ ಹೆಗಲಿಗೆ ಕಾಂಗ್ರೆಸ್ ಹೈಕಮಾಂಡ್ ವಹಿಸಿದೆ.
`ಟ್ರಬಲ್ ಶೂಟರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿವಕುಮಾರ್ ಅವರಿಗೆ ಮಹತ್ವದ ಜವಾಬ್ದಾರಿ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾಗದಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷಗಳ ಸಚಿವರು, ಶಾಸಕರಲ್ಲಿ ಅಸಮಾಧಾನವುಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಹೈಕಮಾಂಡ್ ಕಿವಿಮಾತು ಹೇಳಿದೆ.
ತೆಂಲಗಾಣ ರಾಜ್ಯ ವಿಧಾನಸಭೆಯ ಚುನಾವಣಾ ಪ್ರಚಾರಕ್ಕಾಗಿ ಆ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಶಿವಕುಮಾರ್ರವರಿಗೆ ಸೂಚ್ಯವಾಗಿ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.