ಯಾದಗಿರಿ : ಜಿಲ್ಲೆಯ ಮುಂಡರಗಿ-ಬೆಳಗೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಳೆದ ಎರಡು ವರ್ಷಗಳ ಹಿಂದೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಈ ರಸ್ತೆಯಲ್ಲಿ ಬರುವಾಗ ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಈಗಾಗಲೇ ಇದೇ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಹೆಂಡತಿ ಮನೆ ಬರುತ್ತಿದ್ದ ಇಬ್ಬರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಊರುಗಳಿಗೆ ಹೆಣ್ಣು ಕೊಡಲು, ಹೆಣ್ಣು ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರಂತೆ. ಅಲ್ಲದೇ ಗ್ರಾಮದಲ್ಲಿ ಯಾರಾದ್ರೂ ಸಂಬಂಧಿಕರು ತೀರಿಕೊಂಡ್ರೂ ಜನ ಬರೋದಕ್ಕೆ ಹಿಂದೆ-ಮುಂದೆ ನೋಡ್ತಿದ್ದಾರಂತೆ.
ಎರಡು ವರ್ಷಗಳ ಹಿಂದೆ ಸೇತುವೆ ಕೊಚ್ಚಿ ಹೋಗಿದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಜೀವ ಭಯಕ್ಕೆ ಹೆದರಿ ತಾತ್ಕಾಲಿಕವಾಗಿ ಬೇರೆಯವರ ಜಮೀನು ಮೂಲಕ ಬರುತ್ತಿದ್ದ ಬೆಳಗೇರಾ ಹಾಗೂ ಮುಂಡರಗಿ ಜನ ಕೆಸರು ತುಂಬಿದ ರಸ್ತೆಯಲ್ಲೇ ಎದ್ನೋ, ಬಿದ್ನೋ ಅಂತಾ ಭಯದಲ್ಲೇ ಓಡಾಡ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಎರಡು ಗ್ರಾಮಗಳಿಗೆ ಓಡಾಡೋದಕ್ಕೆ ರಸ್ತೆ ಇಲ್ಲದ ಕಾರಣ ರೈತನೋರ್ವ ತನ್ನ ಜಮೀನಿನಲ್ಲೇ ಓಡಾಡೋದಕ್ಕೆ ರಸ್ತೆ ಮಾಡಿಕೊಟ್ಟಿದ್ದ. ಪಿಡಬ್ಲೂಡಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣಕ್ಕೆ ತಾತ್ಕಾಲಿಕ ರಸ್ತೆಯನ್ನ ರೈತ ಬಂದ್ ಮಾಡಿದ್ದಾನೆ.