ಬೆಂಗಳೂರು : ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2ರ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್ಗೆ ಚಾಲನೆ ನೀಡಿ 2020ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮುಂದಿನ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿಯಾಗಿದೆ.
ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ.
ಕಬ್ಬಡಿ, ಖೋಖೋ, ಕಂಬಳ, ಎತ್ತಿನಗಾಡಿ ಸ್ಪರ್ಧೆ, ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸೂಚಿಸುತ್ತದೆ. ಗ್ರಾಮಪಂಚಾಯತಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.