ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹೆಣ್ಣು ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾದ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ವಿಷಾಧಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಅಷ್ಟಕ್ಕೂ ನಾನು ಅಶ್ಲೀಲ ಪದ ಬಳಸಿಲ್ಲ. ಗ್ಯಾರಂಟಿಗಳಿಗೆ ಮಾರು ಹೋಗಿ ದಾರಿ ತಪ್ಪಬೇಡಿ ಎಂದಿದ್ದೆ ಅಷ್ಟೇ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಈ ವೇಳೆ ತಮ್ಮ ವೈಯಕ್ತಿಕ ವಿಚಾರವನ್ನೂ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸದನದಲ್ಲೂ ಇದನ್ನು ಹೇಳಿದ್ದೆ. ನಾನು ಜೀವನದಲ್ಲಿ ಒಮ್ಮೆ ಹಾದಿ ತಪ್ಪಿದ್ದೆ. ಬಳಿಕ ನನ್ನ ಪತ್ನಿ ನನ್ನನ್ನು ತಿದ್ದಿದಳು ಎಂದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಈ ಹಿಂದೆ ಮಹಿಳೆಯರ ಬಗ್ಗೆ ಮಾಡಿದ್ದ ಆಕ್ಷೇಪಾರ್ಹ ಹೇಳಿಕೆಗಳನ್ನೂ ಪ್ರಸ್ತಾಪಿಸಿದರು.
ನಿಮ್ಮದೇ ಪಕ್ಷದ ರಣದೀಪ್ ಸುರ್ಜೇವಾಲ ಬಿಜೆಪಿ ಸಂಸದೆ ಹೇಮಮಾಲಿನಿ ಬಗ್ಗೆ ಕೀಳಾಗಿ ಮಾತನಾಡಿದ್ದರು. ನಿಮ್ಮದೇ ಪಕ್ಷದ ಶಾಸಕ ಸದನದಲ್ಲೇ ಅತ್ಯಾಚಾರ್ಯ ಅನಿವಾರ್ಯವಾದರೆ ಆನಂದಿಸಿ ಎಂದಿದ್ದರು. ನಿಮ್ಮದೇ ಪಕ್ಷದ ನಾಯಕಿಯೊಬ್ಬರು ಇತ್ತೀಚೆಗೆ ಕಂಗನಾ ರಣಾವತ್ ಗೆ ಎಷ್ಟು ರೇಟ್ ಫಿಕ್ಸ್ ಮಾಡ್ತೀರಿ ಎಂದಿದ್ದರು. ಇದು ಅತ್ಯದ್ಭುತ ಹೇಳಿಕೆಯೇ ಎಂದು ಡಿಕೆ ಶಿವಕುಮಾರ್ ಗೆ ಪ್ರಶ್ನೆ ಮಾಡಿದ್ದಾರೆ.