ಮಹಾರಾಷ್ಟ್ರದಿಂದ ಬಂದು ರಾಜ್ಯದಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದ ಖತರ್ನಾಕ್ ಕಳ್ಳರ ಗುಂಪನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಬಳ್ಳಾರಿ ಮತ್ತು ಹೊಸಪೇಟೆ ನಗರದಲ್ಲಿನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 1.680 ಕೆಜಿ ಚಿನ್ನ ಮತ್ತು 15.33 ಕೆಜಿ ಬೆಳ್ಳಿ ಸೇರಿ ಒಟ್ಟು 71.09 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಗಂಗಾಪುರ ತಾಲೂಕಿನ ಪಕೋರ ಗ್ರಾಮದ ಪಾರಧಿ ಜನಾಂಗದ ಬಚ್ಚನ್ ತಂದೆ ಭೀಮಕಾಳೆ(27), ಔರಂಗಬಾದ್ ಜಿಲ್ಲೆ ಗಂಗಾಪುರ ತಾಲೂಕಿನ ವಜರ್ ನಿವಾಸಿ ಪಾರಧಿ ಜನಾಂಗದ ವಿವೇಕ್ ತಂದೆ ಕಮಲಾಕರ್ ಪಿಂಪಳೆ(38). ಪತ್ಯೇಕ ಪ್ರಕರಣದಲ್ಲಿ ಆರೋಪಿ ಹೊಸಪೇಟೆ ನಿವಾಸಿ ಪೆನ್ನಪ್ಪ ತಂದೆ ಹನುಮಂತಪ್ಪ(37) ಬಂಧಿತ ಆರೋಪಿಗಳಾಗಿದ್ದಾರೆ.
ಔರಂಗಬಾದ್‌ನಿಂದ ಕಳ್ಳತನ ಮಾಡಲು ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ಸುತ್ತಮುತ್ತ ಕಳ್ಳತನ ಮಾಡಿ ಈ ಗ್ಯಾಂಗ್ ತಲೆ ಮರೆಸಿಕೊಳ್ಳುತ್ತಿತ್ತು.