ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ. ಹೀಗಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮೈತ್ರಿ ಸರಕಾರ ಹಾಗೂ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷೇತರರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಮಾಡಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು? ಆದರೆ ಖಾತೆ ಯಾಕೆ ಇನ್ನೂ ಕೊಟ್ಟಿಲ್ಲ? ಇದೊಂದು ರೀತಿಯಲ್ಲಿ ಅವಮಾನ ಮಾಡಿದ ಹಾಗೆ ಎಂದರು.
ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಎನ್.ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಸಿಎಂ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದರು.
ಇನ್ನು ಫಾರುಕ್ ಗೆ ಸಚಿವ ಸ್ಥಾನ ನೀಡದ ವಿಚಾರಕ್ಕೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಲೇಬೇಕಿತ್ತು. ಫಾರುಕ್ ಗೆ ಸ್ಥಾನ ಕೊಟ್ಟಿದ್ರೆ, ಒಬ್ಬ ಅಲ್ಪ ಸಂಖ್ಯಾತ, ಒಬ್ಬ ಹಿಂದುಳಿದ ವರ್ಗ, ಒಬ್ಬ ದಲಿತರಿಗೆ ಅವಕಾಶ ಕೊಟ್ಟಂತೆ ಆಗ್ತಿತ್ತು. ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು. ಹೀಗಂತ ಮತ್ತೆ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್.