ರಾಜಧಾನಿಯಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಭದ್ರತೆ ಒದಗಿಸುವ ಮಾರ್ಷಲ್ಗಳ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಾರ್ಷಲಗಳ ನೇಮಕದಲ್ಲಿ 2017ರ ನವೆಂಬರ್ ನಿಂದ 2018 ನವೆಂಬರ್ ವರೆಗೆ ಬಿಬಿಎಂಪಿಯಿಂದ ಬಿಡುಗಡೆಯಾಗಿರುವ 14.50 ಕೋಟಿ ರೂ.ಗಳ ಪೈಕಿ 8 ಕೋಟಿ 70 ಲಕ್ಷ ರೂ.ಗಳ ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ನಗರದಲ್ಲಿ 174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟೀನ್ ಮತ್ತು 19 ಅಡಿಗೆ ಮನೆಗಳ ಭದ್ರತಾ ವ್ಯವಸ್ಥೆಗೆ ಒಟ್ಟು 468 ಮಂದಿ ಮಾರ್ಷೆಲ್ಗಳನ್ನು 3 ಪಾಳಿಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಅಭಿವೃದ್ಧಿ, ಸೊಸೈಟಿಯು ಸುಳ್ಳು ದಾಖಲೆಗಳನ್ನು ಸೃಷ್ಠಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಅವ್ಯವಹಾರ ಸಂಬಂಧ 190 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿರುವ ಎನ್.ಆರ್. ರಮೇಶ್, ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಮತ್ತು 12 ತಿಂಗಳ ಅವಧಿಯಲ್ಲಿ ಲೂಟಿಯಾಗಿರುವ 8 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಸ್ಥೆಯಿಂದ ವಾಪಾಸ್ ಪಡೆಯಬೇಕು. ಹಾಗೂ ಸಂಸ್ಥೆಗೆ ನೀಡಿರುವ ಉಪಗುತ್ತಿಗೆಯನ್ನು ರದ್ದುಪಡಿಸಬೇಕೆಂದು ಆಗ್ರಹಪಡಿಸಿದರು.