ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಲೇ ಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ದರ್ಶನ್ ಮನೆ ಮತ್ತು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಮಾಲೀಕತ್ವದ ಎಸ್.ಎಸ್ ಆಸ್ಪತ್ರೆ ತೆರವಿಗೆ ವಿಶೇಷ ಜಿಲ್ಲಾಧಿಕಾರಿ ಅಕ್ಟೋಬರ್ 1 ರಂದು ಆದೇಶ ಹೊರಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ಮಾಹಿತಿ ನೀಡಿದ್ದಾರೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಲಾಗಿರುವ ದರ್ಶನ್ ಮತ್ತು ಶಿವಶಂಕರಪ್ಪ ಅವರಿಗೆ ಸೇರಿದ ಕಟ್ಟಡಗಳ ಸ್ವಯಂ ತೆರವು ಆದೇಶ ಹೊರಡಿಸಲು ಈಗಾಗಲೇ ವಿಶೇಷ ಜಿಲ್ಲಾಧಿಕಾರಿ ಹೇಮೋಜಿ ನಾಯಕ್ ಅವರಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ತಹಶೀಲ್ದಾರ್ ವರದಿಯನ್ನು ಸಿದ್ಧಪಡಿಸಿದ್ದು ಅಕ್ಟೋಬರ್ 1 ರಂದು ನಾಯಕ್ ಆದೇಶ ಹೊರಡಿಸಲಿದ್ದಾರೆ ಎಂದು ವಿ. ಶಂಕರ್ ಹೇಳಿದ್ದಾರೆ.
ನಟ ಹಾಗೂ ಸಚಿವರಿಗೆ ಸೇರಿದ ಕಟ್ಟಡಗಳಿರುವ ಜಾಗ ಒತ್ತುವರಿ ಆಗಿರುವುದು ಸ್ಪಷ್ಟವಾಗಿದೆ. ಏಳು ದಿನಗಳೊಳಗಾಗಿ ತೆರವು ಮಾಡುವಂತೆ ಜಿಲ್ಲಾಡಳಿತ ಗಡುವು ನೀಡಲಿದೆ. ಇಲ್ಲದಿದ್ದರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಐಡಿಯಲ್ ಹೋಮ್ಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಶಂಕರ್ ತಿಳಿಸಿದ್ದಾರೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡ ಅಕ್ರಮ ಕಟ್ಟಡಗಳನ್ನು ನಾಶ ಮಾಡಲಾಗುತ್ತಿದೆ. ಆದರೆ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳನ್ನು ಸರ್ಕಾರ ತೆರವು ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಪ್ರತಿಷ್ಠಿತರಿಗೆ ಸೇರಿದ ಜಾಗಗಳ ಮರು ಸರ್ವೇ ಕಾರ್ಯ ನಡೆಸಿ ದರ್ಶನ್ ಅವರ ಮನೆ 'ತೂಗುದೀಪ ನಿವಾಸ' ಮತ್ತು ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ 'ಎಸ್ ಎಸ್ ಆಸ್ಪತ್ರೆ'ಯಿಂದ ಅಕ್ರಮ ಭೂ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ