ಬೆಂಗಳೂರು : ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
Photo Courtesy: Google
ಅವರು ಇಂದು ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಸ್ಮಾರಕ ನಿಧಿ ಮತ್ತು ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧೀ ಜಯಂತಿ ಆಚರಣೆ ಹಾಗೂ ಗಾಂಧಿ ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ; ನೈತಿಕ ಭಾರತವನ್ನು ಕಟ್ಟುವ ಶಕ್ತಿ ಎಂದು ತಿಳಿಸಿದರು.
ನಾವು ಇಂದು ದೇಶಕ್ಕಾಗಿ ದುಡಿಯುವ ಮೂಲಕ ವಿಶ್ವದಲ್ಲಿ ಅಗ್ರ ಸ್ಥಾನ ಪಡೆಯಲು ಶ್ರಮಿಸಬೇಕು. ಇಂದಿನ ಸಮಾಜದಲ್ಲಿ ನಾವು ನಾಗರಿಕ ಜವಾಬ್ದಾರಿಯ ಕೊರತೆಯನ್ನು ಕಾಣುತ್ತೇವೆ. ಕರ್ತವ್ಯ ಪ್ರಜ್ಞೆ ಮೂಡಿಸಿಕೊಂಡು ಕೆಲಸ ಮಾಡಿದರೆ ಯಾವ ಸವಾಲೂ ದೊಡ್ಡದಲ್ಲ. ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿದರೆ, ಅದುವೇ ಗಾಂಧೀಜಿಯವರಿಗೆ ನಾವು ನೀಡುವ ಗೌರವ ಎಂದು ತಿಳಿಸಿದರು.
ಗಾಂಧೀಜಿಯವರು ಜನರಿಂದ ಉತ್ಪಾದನಾ ಚಟುವಟಿಕೆಗಳು ನಡೆಯಬೇಕು ಎಂದು ಬಯಸಿದ್ದರು. ದುಡಿಮೆಯಲ್ಲಿ ಆರ್ಥಿಕತೆ ಇದೆ. ದುಡ್ಡಿನಲ್ಲಿ ಅಲ್ಲ ಎಂದ ಮುಖ್ಯಮಂತ್ರಿಗಳು, ಅದಕ್ಕಾಗಿಯೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಕಾಯಕ ಪೂಜೆಗಿಂತಲೂ ಮಿಗಿಲಾದದ್ದು. ಸ್ವರ್ಗ ಸಮಾನ ಎಂದು ಮುಖ್ಯಮಂತ್ರಿಗಳು ನುಡಿದರು.
ಪರಿವರ್ತನೆ ಗಾಂಧೀಜಿಯವರ ದೊಡ್ಡ ಗುಣ. ನಾವು ಇಂದು ಸುಳ್ಳನ್ನು ಉಳಿತಾಯ ಮಾಡಿ, ಸತ್ಯವನ್ನು ಖರ್ಚು ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿಯವರ ಹೋರಾಟಕ್ಕೆ ತಾತ್ವಿಕ, ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನಲೆಯಿದೆ. ಪ್ರತಿಯೊಬ್ಬರೂ ಬದ್ಧತೆಯೊಂದಿಗೆ ಕೆಲಸ ಮಾಡಿದಾಗ ಸಾರ್ಥಕತೆ ಮೂಡುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಪ್ರಗತಿಯಲ್ಲಿದೆ. ದಾವಣಗೆರೆಯ ಗಾಂಧೀ ಭವನ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿವೆ. ಉಳಿದ ಜಿಲ್ಲೆಗಳ ಗಾಂಧಿ ಭವನಗಳೂ ಶೀಘ್ರವೇ ಸಿದ್ಧವಾಗಲಿವೆ ಎಂದು ನುಡಿದರು.
ಮಾಜಿ ಸಚಿವ ಹೆಚ್.ಕೆ. ಪಾಟೀಲ, ನ್ಯಾ. ಅಶೋಕ ಬಿ. ಹಿಂಚಗೇರಿ ಮಾತನಾಡಿದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಹಾಲಪ್ಪ ಆಚಾರ್, ಸಂಸದರಾದ ಶಿವಕುಮಾರ್ ಉದಾಸಿ, ಡಾ.ಎಲ್. ಹನುಮಂತಯ್ಯ ಮತ್ತು ಇತರರು ಉಪಸ್ಥಿತರಿದ್ದರು.
ಸಿದ್ದಗಂಗಾ ಮಠದ ಪರವಾಗಿ ಡಾ. ಶಿವಪ್ಪ ಹಾಗೂ ಮೀರಾತಾಯಿ ಕೊಪ್ಪಿಕರ್ ಪರವಾಗಿ ಮುಧೋಳ ಶಾಸಕರೂ ಆದ ಸಚಿವ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಸ್ವೀಕರಿಸಿದರು.