ಗೊರಗುಂಟೆಪಾಳ್ಯದಿಂದ ಪಾರ್ಲೇಜಿ ಪ್ಯಾಕ್ಟರಿವರೆಗಿನ ಪ್ಲೈಓವರ್‌ನಲ್ಲಿ ಕಳೆದ 45 ದಿನಗಳ ಹಿಂದೆ ಸಮಸ್ಯೆ ಕಾಣಿಸಿಕೊಂಡಿದ್ದು ಮುಂದೆ ತೊಂದರೆ ಎದುರಾಗದಂತೆ ಇಡೀ ಮೇಲ್ಸೇತುವೆಯನ್ನು ಪರಿಶೀಲಿಸಿ ಏನಾದರೂ ವ್ಯತ್ಯಾಸಗಳಿದ್ದರೆ ಈಗಲೇ ಸರಿ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಮುಗಿದಿದ್ದು ಮುಂದಿನ ಬುಧವಾರದೊಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ವಿಭಾಗದ ಮುಖ್ಯಸ್ಥ ಗಿರೀಶ್ ತಿಳಿಸಿದ್ದಾರೆ.
ಫ್ಲೈ ಓವರ್ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಅತೀ ದುರ್ಗಮವಾಗಿದ್ದು, ಹತ್ತು ನಿಮಿಷ ಕ್ರಮಿಸಬೇಕಾದ ರಸ್ತೆಯಲ್ಲಿ ಈಗ ಗಂಟೆಗಟ್ಟಲೆ ಆಮೆ ಗತಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಕಳೆದ ಒಂದೂವರೆ ತಿಂಗಳಿಂದ ಎದುರಾಗಿತ್ತು. ಅಲ್ಲದೇ ತುಮಕೂರು ಕಡೆಗೆ ಹಾಗೂ ಬೆಂಗಳೂರು ನಗರಕ್ಕೆ ಹೋಗಬೇಕಾದ ಪ್ರಯಾಣಿಕರು ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಳಿಗ್ಗೆ ಮತ್ತು ಸಾಯಂಕಾಲ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಹತ್ತು ವರ್ಷಗಳ ಹಿಂದೆ ಇಂಟರ್‌ಲಾಕಿಂಗ್ ಸಿಸ್ಟಮ್ ಬಳಸಿಕೊಂಡು ಗೊರಗುಂಟೆಪಾಳ್ಯದಿಂದ ನಾಗಸಂದ್ರ ಪಾರ್ಲೆಜಿವರೆಗೆ ಈ ಮೇಲ್ಸೆತುವೆ ನಿರ್ಮಾಣ ಮಾಡಲಾಗಿತ್ತು. ಮೇಲ್ಸೇತುವೆ ನಿರ್ಮಾಣದ ವೇಳೆ ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್ ನಡುವಿನ ಸ್ಲಾಬ್‌ಗಳನ್ನ ಬಿಗಿಗೊಳಿಸಲು ಅಳವಡಿಸುವ ರೋಪ್‌ನ ಒಂದು ವೈರ್ ಸಡಿಲವಾಗಿದ್ದು ಇದನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ವಾರ ಎರಡು ವಾರ ಹೀಗೆ ದಿನಗಳ ಸಮಯವಕಾಶ ಕೇಳಿತ್ತು ಆದರೆ ತಿಂಗಳಾದರೂ ಸರಿಪಡಿಸಲ್ಲದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು.
ನಿರ್ವಹಣೆ ವೇಳೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು ಫ್ಲೈಓವರ್‌ನಲ್ಲಿ 116 ಪಿಲ್ಲರ್‌ಗಳಿದ್ದು ಅವುಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಡಿದ್ದ 102ನೇ ಪಿಲ್ಲರ್ ಸ್ಲಾಬ್‌ನಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು. ಆ ಫ್ಲೈಓವರ್‌ನಲ್ಲಿ 16 ರೋಪ್‌ಗಳನ್ನ ಅಳವಡಿಸಿದ್ದು ಅದರಲ್ಲಿ ಒಂದು ರೋಪ್‌ನ ಸೆಗ್ಮೆಂಟ್ ಜಾಯಿಂಟ್ ಮಾತ್ರ ಸಮಸ್ಯೆಯಾಗಿದ್ದು ಉಳಿದ 15 ರೋಪ್‌ಗಳು ಸುಭದ್ರವಾಗಿವೆ ಎಂದು ತಿಳಿಸಿದ್ದರು.
ದೋಷ ಕಂಡು ಬಂದಿರುವ ಉಪಕರಣಗಳನ್ನು ಹೊಸದಾಗಿ ಬದಲಿಸಬೇಕಾಗಿದ್ದರಿಂದ ಇಷ್ಟು ದಿನ ಪ್ಲೈಓವರ್ ಬಂದ್ ಮಾಡಿ ದುರಸ್ಥಿ ಕಾರ್ಯ ಆರಂಭಿಸಿದ್ದರು. ಆ ದುರಸ್ಥಿ ಕಾರ್ಯ ಇದೀಗ ಮುಗಿದಿದ್ದು ಇದಿನಿಂದ ಲೋಡ್ ಟೆಸ್ಟಿಂಗ್ ಮಾಡಿ ಬುಧವಾರ ಅಥವಾ ಗುರುವಾರ ವಾಹನಸವಾರರ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇನ್ನೂ ಈ ಮಾರ್ಗದಲ್ಲಿ ಪ್ರತಿದಿನ 50 ರಿಂದ 60ಸಾವಿರ ವಾಹನಗಳು ಸಂಚರಿಸುತ್ತವೆ. ಉತ್ತರ ಭಾಗದ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ಈ ಪ್ಲೈಓವರ್ ನಿರ್ಮಾಣವಾಗಿ 10ವರ್ಷ ಆಗಿದೆಯಷ್ಟೆ, 10 ವರ್ಷಕ್ಕೇ ಹೀಗಾದರೆ 100 ವರ್ಷಗಳ ಗ್ಯಾರಂಟಿ ಏನಾಗಬೇಕು. ಇದರ ಉಸ್ತುವಾರಿ ವಹಿಸಿಕೊಂಡಿರುವ ಸಂಸ್ಥೆ ಏನು ಮಾಡುತ್ತಿದೆ. ದುರಸ್ತಿಗೆ ವಾರ ಅಂತಾ ಅಂದರು, ನಂತರ 15 ದಿನ ಅಂದಿದ್ದರು. ಆದರೂ ಒಂದುವರೆ ತಿಂಗಳ ನಂತರ ಸಂಚಾರಕ್ಕೆ ಮುಕ್ತವಾಗುವುದರಿಂದ ಹ್ಯೆರಾಣಾಗಿದ್ದ ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ.