ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ವಿಧಾನಸಭೆಗೆ ಇಂದು ತಿಳಿಸಿದ್ದಾರೆ.
ಸದಸ್ಯರಾದ ಶಶಿಕಲಾ ಜೊಲ್ಲೆ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ ಬುದ್ದಿಮಾಂದ್ಯ ಮಹಿಳೆ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ಸಮಾಜಕ್ಕೆ ಶೋಭೆ ತರುವಂತಹುದ್ದಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆರೋಪಿ ಎಎಸ್‍ಐ ಉಮೇಶ್‍ನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈತನ ವಿರುದ್ದ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಗೃಹ ಸಚಿವರು, ಇಂತಹ ಪ್ರಕರಣಗಳಲ್ಲಿ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪೊಲೀಸ್ ಬಲ ಸಂವರ್ಧನೆ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ವತಿಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳಾ ಸಹಾಯವಾಣಿ, ಅಭಯ ಗಸ್ತು ವಾಹನ ನೀಡಲಾಗಿದೆ, ಮಹಿಳಾ ಠಾಣೆಗಳ ಸ್ಥಾಪನೆ ಮಾಡಲಾಗಿದೆ. ಒಟ್ಟು 20 ಸಾವಿರ ಪೊಲೀಸ್ ಪೇದೆಗಳ ನೇಮಕಾತಿ ಮಾಡಲಾಗಿದ್ದು, 1000 ಸಬ್ ಇನ್ಸ್ ಪೆಕ್ಟರ್ ಗಳ ನೇಮಕ ಆಗಿದೆ. ಈ ಪೈಕಿ 160 ಮಂದಿ ಎಸ್‍ಐಗಳು 2000 ಪೇದೆಗಳನ್ನು ಬೆಂಗಳೂರಿಗೆ ನಿಯೋಜಿಸಲಾಗಿದೆ ಎಂದು ಕುಡಚಿ ಶಾಸಕ ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.