ಬೀದಿನಾಯಿಗಳ ಹಾವಳಿಗೆ ಕುರಿ ಸೇರಿದಂತೆ ಐದು ಮೇಕೆಗಳು ಬಲಿಯಾದ ಘಟನೆ ಗದಗ ನಗರದ ಒಕ್ಕಲಗೇರಿಯ 21 ನೇ ವಾರ್ಡ್ ನಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಮನೆಯ ಹೊರಾಂಗಣದಲ್ಲಿನ ಗುಡಿಸಲಿನಲ್ಲಿ ಕಟ್ಟಲಾದ ಆಡುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಕಳೆದ ಎರಡು ದಿನದ ಹಿಂದೆ ಎರಡು ಮೇಕೆ ಮರಿಗಳನ್ನು ಬೀದಿ ನಾಯಿಗಳು ತಿಂದು ಹಾಕಿದ್ದವು. ಈ ಬಗ್ಗೆ ಸ್ಥಳೀಯರು ನಗರಸಭೆಯ ಗಮನಕ್ಕೆ ತಂದಿರಲಿಲ್ಲ. ಆದ್ರೆ ಮತ್ತೆ ಅದೇ ರೀತಿಯ ಘಟನೆಗಳು ಮುಂದುವರೆದು ಸ್ಥಳೀಯರು ತೊಂದರೆಗೀಡಾಗಿದ್ದಾರೆ.
ನಮ್ಮಂತ ಕೂಲಿ ಮಾಡೋ ಬಡವರು ಮೇಕೆ, ಕುರಿ ಸಾಕಿ ಉಪಜೀವನ ಮಾಡುತ್ತೇವೆ. ಆದ್ರೆ ಈ ರೀತಿ ಬೀದಿನಾಯಿಗಳ ಹಾವಳಿಗೆ ಇರೋ ಬರೋ ಮೇಕೆಗಳು ಸತ್ತು ಹೋದ್ರೆ ನಮ್ಮ ಜೀವನ ತೀರಾ ಸಂಕಷ್ಟಕ್ಕೆ ಸಿಲುಕುತ್ತೆ. ಜತೆಗೆ ಈ ಪ್ರದೇಶದಲ್ಲಿ ಸಾಕಷ್ಟು ಕಸ ಬೆಳೆದಿದ್ದು, ಸಣ್ಣ ಮಕ್ಕಳು ಆಟವಾಡಲು ಹೋಗುತ್ತಿರುತ್ತಾರೆ.
ಈ ಸಂದರ್ಭದಲ್ಲಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಸಂಭವವಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಕೂಡಲೇ 21 ನೇ ವಾರ್ಡ್ ನ ಸ್ವಚ್ಛತೆ ಬಗ್ಗೆ ಗಮನಹರಿಸಿಬೇಕು. ಜತೆಗೆ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.