ಗೋವಾ ಕನ್ನಡಿಗರ ಮೇಲೆ ಅಲ್ಲಿನ ಸರ್ಕಾರ ಮತ್ತೆ ದೌರ್ಜನ್ಯ ಎಸಗಿದೆ. ಬೈನಾ ಬೀಚ್`ನಲ್ಲಿ ನೆಲೆಸಿದ್ದ ಕನ್ನಡಿಗರ ವಕ್ಕಲೆಬ್ಬಿಸಲಾಗಿದೆ. ಬೆಳ್ಳಂ ಬೆಳಗ್ಗೆ ಜೆಸಿಬಿ, ಟಿಪ್ಪರ್`ಗಳಿಂದ ಮನೆಗಳನ್ನ ಧರೆಗುರುಳಿಸಲಾಗಿದೆ.
ಕನ್ನಡಿಗರಿಗೆ ಸೇರಿದ ಸುಮಾರು 55 ಮನೆ ಮತ್ತು ದೇಗುಲಗಳನ್ನ ತೆರವು ಮಾಡಲಾಗಿದೆ. ದಕ್ಷಿಣ ಗೋವಾದ ಡಿಸಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಗೋವಾ ಸರ್ಕಾರದ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 155 ಮನೆಗಳನ್ನ ತೆರವು ಮಾಡಲಾಗಿದ್ದು, ಇದೀಗ, ಉಳಿದ 55 ಕನ್ನಡಿಗರ ಮನೆಗಳನ್ನೂ ಕೆಡವಲಾಗಿದೆ. ಕನ್ನಡಿಗರು ಎಷ್ಟೆ ಗೋಗರೆದರೂ ಗೋವಾ ಸರ್ಕಾರ ಕೃಪೆ ತೋರಿಲ್ಲ. ಪುರಾತನ ದೇಗುಲವನ್ನೂ ಕೆಡವಲಾಗಿದೆ.
ಬೈನಾ ಬೀಚ್`ನಲ್ಲಿ ನೆಲೆಸಿದ್ದ ಕನ್ನಡಿಗರು ಆಧಾರ್, ರೇಶನ್ ಕಾರ್ಡ್ ಸಹ ಪಡೆದಿದ್ದರು. ಅಷ್ಟು ಮಾತ್ರವಲ್ಲದೆ ಪ್ರತೀ ವರ್ಷ ಸರ್ಕಾರಕ್ಕೆ ತೆರಿಗೆ ಕೂಡ ಪಾವತಿಸುತ್ತಿದ್ದರು. ಆದರೂ ಗೋವಾ ಸರ್ಕಾರ ಅವರ ಮನೆಗಳನ್ನ ಕೆಡವಿ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಕನ್ನಡಿಗರು ಅಕ್ರಮವಾಗಿ ನೆಲೆಸಿದ್ದಾರೆಂಬುದು ಗೋವಾ ಸರ್ಕಾರದ ನಿರ್ಧಾರವಾಗಿದ್ದು, ಕನ್ನಡಿಗರೆಂಬ ಕಾರಣಕ್ಕೆ ಕೊಂಚವೂ ಸಹಾನುಭೂತಿ ತೋರದೇ ತೆರವು ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ