ಹಾವೇರಿ: ಮದುವೆಗೆ ಮೊದಲೇ ಹೆಣ್ಣು ಮಗುವಿಗೆ ತಾಯಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಆದರೆ ಮಗು ಕಾಣೆಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ
ಅ. 7ರಂದು ಬೆಳಗ್ಗೆ ವೀರಾಪುರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಹೊಟ್ಟೆನೋವು ಎಂದು ಹಾನಗಲ್ ಸಮೀಪದ ಯುವತಿ ತನ್ನ ಕುಟುಂಬ ಸಮೇತ ಬಂದಿದ್ದಾಳೆ. ಚಿಕಿತ್ಸೆಗೊಳಪಡಿಸಿದ ವೈದ್ಯರು ಯುವತಿಗೆ ಎಂಟು ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ಯುವತಿಯ ಪಾಲಕರು ಚಿಂತೆಗೊಳಗಾಗಿದ್ದಾರೆ.
ಕೂಡಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆ ವೈದ್ಯರು ಯುವತಿಗೆ ಹೆರಿಗೆ ಮಾಡಿಸಿದ್ದಾರೆ. ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ವಿಷಯ ಇಷ್ಟೇ ಆಗಿದ್ದಿದ್ದರೆ ಇಷ್ಟು ಚರ್ಚೆಯಾಗುತ್ತಿರಲಿಲ್ಲ. ಯುವತಿಗೆ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಯುವತಿಯ ತಾಯಿ ಅದೆಲ್ಲಿಗೊ ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗುತ್ತಿದೆ. ಈ ದೃಶ್ಯಗಳೆಲ್ಲವೂ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಈ ಬಗ್ಗೆ ಆಸ್ಪತ್ರೆ ವೈದ್ಯರು ವಿಚಾರಿಸಿದಾಗ, ಮಕ್ಕಳಿಲ್ಲದ ಸಂಬಂಧಿಕರ ಮನೆಗೆ ಮಗುವನ್ನು ನೀಡಲಾಗಿದೆ ಎಂದು ಯುವತಿ ಸಂಬಂಧಿಕರು ಹೇಳಿದ್ದಾರೆ. ಈ ನಡುವೆ ಅದೇ ದಿನ ಸಂಜೆ ತರಾತುರಿಯಲ್ಲಿ ಯುವತಿಯನ್ನ ಸಂಬಂಧಿಕರು ಮನೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯ ದಾಖಲೆಯಲ್ಲಿ ಮಗು ಕಾಣೆಯಾಗಿದೆ ಎಂದು ಬರೆದಿದ್ದು ವೈದ್ಯರಲ್ಲಿ ಅನುಮಾನ ಹುಟ್ಟಿಸಿದೆ.
ಕೂಡಲೇ ಎಚ್ಚೆತ್ತ ವೈದ್ಯರು, ಅವಿವಾಹಿತ ಯುವತಿಗೆ ಮಗು ಜನಿಸಿದ್ದು, ಜನಿಸಿದ ಕೆಲವೇ ಸಮಯದಲ್ಲಿ ಮಗು ಕಾಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಲಿಖಿತ ದೂರು ದಾಖಲಿಸಿದ್ದಾರೆ.
ಮದುವೆಗೆ ಮೊದಲೇ ಮಗು ಜನಿಸಿರುವುದರಿಂದ ಮರ್ಯಾದೆಗೆ ಅಂಜಿ ಮಗುವನ್ನ ಯುವತಿಯ ತಾಯಿಯೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.