Webdunia - Bharat's app for daily news and videos

Install App

ಲಸಿಕೆ ಪಡೆಯಿರಿ, ಸುರಕ್ಷತಾ ಕ್ರಮ ಪಾಲಿಸಿ

Webdunia
ಶನಿವಾರ, 27 ನವೆಂಬರ್ 2021 (20:54 IST)
sudhakar
ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಕೋವಿಡ್ ಲಸಿಕೆಯನ್ನು ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡುಬಂದಿಲ್ಲ. ಇದಕ್ಕಾಗಿ ನಿನ್ನೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
 
ವಿಮಾನ ನಿಲ್ದಾಣಗಳಲ್ಲಿ ಕ್ರಮ ವಹಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೂ ಅಲ್ಲಿ ನಿಯೋಜಿಸಲಾಗಿದೆ. ಹೊಸ ವೈರಾಣು ಹರಡುವ ವೇಗ ಹೆಚ್ಚಿದೆ ಎಂದು ತಿಳಿದುಬಂದಿದೆ. ಆದರೆ ಇದ ತೀವ್ರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಹೆಚ್ಚು ಆತಂಕಪಡಬೇಕಿಲ್ಲ. ನಮ್ಮ ದೇಶದಲ್ಲಿ ಈ ರೀತಿಯ ಹೊಸ ವೈರಾಣು ಕಂಡುಬಂದಿಲ್ಲ. ಎಲ್ಲರೂ ಕೋವಿಡ್ ನ ಎರಡೂ ಡೋಸ್ ಗಳನ್ನು ಪಡೆಯಬೇಕು. ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಜನರು ಅನುಸರಿಸಬೇಕು ಎಂದರು. 
 
ಧಾರವಾಡದ ಕಾಲೇಜಿನಲ್ಲಿ ಸಮಾರಂಭ ನಡೆದ ವೇಳೆ ಕೋವಿಡ್ ಹರಡಿದೆ ಎನ್ನಲಾಗಿದೆ. ಸುಮಾರು 2,000 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 281 ವಿದ್ಯಾರ್ಥಿಗಳ ಮಾದರಿ ಪಾಸಿಟಿವ್ ಆಗಿದೆ. ಇನ್ನೂ ಹಲವರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಆದರೆ ಪಾಸಿಟಿವ್ ಆದವರಿಗೂ ಹೆಚ್ಚು ತೀವ್ರತೆ ಇಲ್ಲ. ಇದರಲ್ಲಿ ಕೆಲವನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಡಿಸೆಂಬರ್ ಆರಂಭದಲ್ಲಿ ಈ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದರು.
 
ಎರಡನೇ ಡೋಸ್ ಪಡೆಯಿರಿ
 
ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಅವರೆಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ವಿಚಾರದಲ್ಲಿ ಯಾರೂ ಉದಾಸೀನ ಮಾಡಬಾರದು. ಒಬ್ಬರಿಗೆ ಕೊರೊನಾ ಬಂದರೆ ಅದು ಇಡೀ ಕುಟುಂಬಕ್ಕೆ ಬರುವ ಸಾಧ್ಯತೆ ಇರುವುದರಿಂದ ಲಸಿಕೆ ಪಡೆಯಬೇಕು. ಮೂರನೇ ಅಲೆ ಬಂದಾಗ ಲಸಿಕೆ ಪಡೆಯದವರಿಗೆ ಸಮಸ್ಯೆಯಾಗಬಹುದು. ದೇಶದಲ್ಲಿ ಮೊದಲ ಡೋಸ್ ಸರಾಸರಿ ಶೇ.80 ಇದ್ದರೆ, ರಾಜ್ಯದಲ್ಲಿ ಶೇ.90 ಕ್ಕೂ ಅಧಿಕವಾಗಿದೆ. ಎರಡನೇ ಡೋಸ್ ನಲ್ಲಿ ದೇಶದ ಸರಾಸರಿ ಶೇ.42-43 ಇದ್ದು, ರಾಜ್ಯದಲ್ಲಿ ಶೇ.57 ಇದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು.
 
ಸೋಮವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಂತರ ಚರ್ಚೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಕಳೆದೆರಡು ವರ್ಷದಿಂದ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಬೇರೆ ದೇಶಗಳಲ್ಲಿ ಹೊಸ ವೈರಾಣು ಕಂಡುಬಂದಿರುವುದರಿಂದ ಪ್ರಧಾನಿಗಳು ಸಭೆ ನಡೆಸಲಿದ್ದಾರೆ ಎಂದರು.
 
25 ರೂಪಾಂತರಿ
 
ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈಗ ಕಂಡುಬಂದಿರುವ ಹೊಸ ವೈರಾಣು ಬಗ್ಗೆಯೂ ಅಧ್ಯಯನಗಳಾಗುತ್ತಿದೆ. ಹೊಸ ವೈರಾಣುವಿನ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ. ಆದರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಜೊತೆಗೆ ಸುರಕ್ಷತಾ ನಿಯಮ ಪಾಲಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣುಗೆ ಓಮಿಕ್ರಾನ್ ಎಂಬ ಹೆಸರು ನೀಡಿದ್ದಾರೆ. ಇದು ಎಷ್ಟು ತೀವ್ರತೆ ಹೊಂದಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದರು. 
 
ಔಷಧಿ ಖರೀದಿ
 
ಔಷಧಿ ಖರೀದಿ ಕುರಿತು ಸಭೆ ನಡೆಸಲಾಗಿದೆ. ಔಷಧಿಗಾಗಿ ಸುಮಾರು 38 ಕೋಟಿ ರೂ. ಅನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಕೋವಿಡ್ ನಿಂದಾಗಿ ಜನರಲ್ ಔಷಧಿಗಳನ್ನು ಖರೀದಿಸುವುದು ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಕೋರ್ಟ್ ನಲ್ಲೂ ಪ್ರಕರಣ ಇದ್ದಿದ್ದರಿಂದ ಕೆಲ ಟೆಂಡರ್ ಗಳೂ ಆಗಿರಲಿಲ್ಲ. ಸ್ಥಳೀಯವಾಗಿಯೇ ಔಷಧಿ ಖರೀದಿಸಲು ಹಣ ನೀಡಲಾಗಿದೆ. ತಾಲೂಕು, ಜಿಲ್ಲಾಸ್ಪತ್ರೆ ಎಲ್ಲ ಆಸ್ಪತ್ರೆಗಳಲ್ಲಿ ಎರಡು ಮೂರು ದಿನಗಳಲ್ಲಿ ಔಷಧಿ ದೊರೆಯಲಿದೆ. ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments