ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ತಿಂಗಳು ಸಮೀಪಿಸುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಗೌರಿ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.
ಗೌರಿ ಹತ್ಯೆ ಬಳಿಕ ಸ್ಥಗಿತವಾಗಿದ್ದ ಅವರ ಖಾತೆ ಮತ್ತೆ ಚಾಲ್ತಿಗೆ ಬಂದಿರೋದು ಅನುಮಾನಕ್ಕೆ ಕಾರಣವಾಗಿದೆ. ಅಕ್ಟೋಬರ್ 24ರ ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಗೌರಿ ಫೇಸ್‌ಬುಕ್ ಅಕೌಂಟ್ ಲಾಗ್‌ಇನ್ ಆಗಿದೆ. ಅಕೌಂಟ್ ಲಾಗ್‌ಇನ್ ಆಗಿರುವ ಸ್ಕ್ರೀನ್ ಶಾಟ್‌ಗಳು ಲಭ್ಯವಾಗಿವೆ. ತನಿಖೆಯ ದಾರಿತಪ್ಪಿಸುವ ಉದ್ದೇಶದಿಂದ ಗೌರಿ ಫೇಸ್‌ಬುಕ್ ಖಾತೆ ಬಳಸಿಕೊಳ್ಳಲಾಗುತ್ತಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವಾಗಲಿ, ಗೌರಿ ಕುಟುಂಬವಾಗಲಿ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೌರಿ ಹತ್ಯೆ ಪ್ರಕರಣದ ತನಿಖಾಧಿಕಾರಿ ಡಿಸಿಪಿ ಅನುಚೇತ್, ನಾವು ಗೌರಿ ಫೇಸ್‌ಬುಕ್ ಖಾತೆ ಓಪನ್ ಮಾಡಿಲ್ಲ. ಅದರ ಪಾಸ್‌ವರ್ಡ್ ಕೂಡ ಗೊತ್ತಿಲ್ಲ. ತನಿಖೆಯ ಉದ್ದೇಶಕ್ಕಾಗಿ ನಮಗೆ ಮಾಹಿತಿಯ ಅಗತ್ಯಬಿದ್ದರೆ ಫೇಸ್‌ಬುಕ್ ಕಂಪನಿಯಿಂದಲೇ ಪಡೆಯುತ್ತೇವೆ. ಗೌರಿ ಫೇಸ್‌ಬುಕ್ ಮತ್ತೆ ಚಾಲ್ತಿಯಾಗಿರುವುದರಿಂದ ತನಿಖೆಗೆ ಯಾವುದೆ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌರಿ ಸಹೋದರಿ ಕವಿತಾ ಲಂಕೇಶ್, ಈ ಬಗ್ಗೆ ನನಗೆ ನಿನ್ನೆ ಸಂಜೆ ಗೊತ್ತಾಯಿತು. ಕೂಡಲೇ ನಾನು ಪಾಸ್‌ವರ್ಡ್ ಬದಲಿಸಿದ್ದೇನೆ. ಗೌರಿ ಫೇಸ್‌ಬುಕ್ ಪಾಸ್‌ವರ್ಡ್ ಆಕೆಯ ಕೆಲ ಆಪ್ತ ಸ್ನೇಹಿತರಿಗೆ ಗೊತ್ತಿತ್ತು. ಆದರೆ ಯಾರು ಲಾಗ್ ಇನ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.