ಕರ್ನಾಟಕದಲ್ಲಿ ಈಗ ಅಧಿಕಾರದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ' ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿರುಗೇಟು ಕೊಟ್ಟರು.
ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಬೇಲ್ನಲ್ಲಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನು ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ನಮ್ಮ ಮೇಲೆ ಮಾಡುತ್ತಿರುವ 40 ಪರ್ಸೆಂಟ್ ಆರೋಪಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ, ತನಿಖೆ ಮಾಡಿಸುತ್ತೇನೆ' ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
ಚನ್ನಪಟ್ಟಣದಲ್ಲಿ ಕಾಮಗಾರಿಯೊಂದರ ಶಂಕುಸ್ಥಾಪನೆ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಸರ್ಕಾರದ ಕಾಮಗಾರಿಗಳ ವಿಚಾರದಲ್ಲಿ ರಾಜಕಾರಣ ಬೆರೆಸೋದು ಸರಿಯಲ್ಲ. ಇದರಲ್ಲಿ ಹಿಂಸೆಗೆ ಅವಕಾಶವಿಲ್ಲ. ಒಟ್ಟಾರೆ ಸರ್ಕಾರದ ಅನುದಾನ ಜನರಿಗೆ ಮುಟ್ಟುವುದು ಮುಖ್ಯ. ಇಂತಹ ಸಂದರ್ಭ ಬಂದಾಗ ಹಿಂದಿನ ಸರ್ಕಾರಗಳು ಏನೆಲ್ಲ ಮಾಡಿವೆ ಎನ್ನುವ ಬಗ್ಗೆಯೂ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.