ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ, ಎ.ಎಂ. ಪ್ರಸಾದ್, ಸಚಿವ ಕೆ.ಜೆ ಜಾರ್ಜ್ ತನಿಖೆ ನಡೆಸುವಂತೆ ಆದೇಶಿಸಿದೆ.
ಮಡಿಕೇರಿಯಲ್ಲಿ ಜು.7ರಂದು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೊದಲು ಸ್ಥಳೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಆ ಬಳಿಕ ತಾವು ತಂಗಿದ್ದ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಗಣಪತಿ ಕುಟುಂಬ ದೂರು ದಾಖಲಿಸಿತ್ತು. ಇದಾದ ಬಳಿಕ ತನಿಖೆ ನಡೆಸುವಂತೆ ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿತ್ತು.
ಸಿಐಡಿ ಎಡಿಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿತ್ತು. ಪ್ರಕರಣದ ಬಿ ರಿಪೋರ್ಟ್ ಸಹ ಸಲ್ಲಿಕೆಯಾಗಿತ್ತು. ಇದೇ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಸಿಐಡಿ ತನಿಖೆ ವೇಳೆ ಸರಿಯಾದ ಸಾಕ್ಷಿಗಳನ್ನ ಸಂಗ್ರಹಿಸಿಲ್ಲ ಎಂದು ಗಣಪತಿ ಕುಟುಂಬ ಆರೋಪಿಸಿತ್ತು. ನಿಸ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಕೋರಿ ಗಣಪತಿ ತಂದೆ ಕುಶಾಲಪ್ಪ ಮತ್ತು ಸಹೋದರ ಮಾಚಯ್ಯ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಕರಣದ ತನಿಖೆ ನಡೆಸಿ, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ, ಎ.ಎಂ. ಪ್ರಸಾದ್, ಸಚಿವ ಕೆ.ಜೆ ಜಾರ್ಜ್ ತನಿಖೆ ನಡೆಸುವಂತೆ ಆದೇಶಿಸಿದೆ. ಮೂರು ತಿಂಗಳಲ್ಲಿ ಪ್ರಕರಣದ ವರದಿ ನೀಡುವಂತೆ ಸೂಚಿಸಿದೆ.