ಬೆಂಗಳೂರು: ಧಾರಾಕಾರ ಮಳೆಯಿಂದಾಗಿ ಇಡೀ ಬೆಂಗಳೂರೇ ಸ್ವಿಮ್ಮಿಂಗ್ ಪೂಲ್ ನಂತಾಗಿರುವ ಬಗ್ಗೆ ವಿಪಕ್ಷಗಳ ಟೀಕೆಗೆ ಗೃಹಸಚಿವ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಮಳೆ ಬಂದಾಗ ನೀರನ್ನು ಏನು ಆಕಾಶಕ್ಕೆ ಕಳುಹಿಸಕ್ಕೆ ಆಗುತ್ತಾ ಎಂದಿದ್ದಾರೆ.
ಬೆಂಗಳೂರು ಮಳೆಯಿಂದಾಗಿ ಆಗಿರುವ ಅವಾಂತರಗಳ ಬಗ್ಗೆ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ಮೂದಲಿಸಿದೆ. ಈ ಬಗ್ಗೆ ಮಾಧ್ಯಮಗಳು ಗೃಹಸಚಿವ ಜಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ.
ಯಾವತ್ತಾದ್ರೂ ಈ ಅಕ್ಟೋಬರ್ ನಲ್ಲಿ ಇಷ್ಟು ಮಳೆಯಾಗಿರುವುದನ್ನು ನೋಡಿದ್ದೀರಾ ನೀವು? ನಾನಂತೂ ಸದ್ಯ ಯಾವತ್ತೂ ನೋಡಿಲ್ಲ ಇಷ್ಟೊಂದು ಮಳೆ. ಮಳೆ ನೀರು ಬರುತ್ತಿದೆ ಎಂದು ವಾಪಸ್ ಆಕಾಶಕ್ಕೆ ಕಳುಹಿಸಕ್ಕೆ ಆಗುತ್ತಾ? ಎಷ್ಟೇ ದೊಡ್ಡ ಸಿಟಿಯಾದ್ರೂ, ಎಂಥಾ ಸಿಸ್ಟಂ ಇದ್ರೂ ನೀರು ನಿಲ್ಲುವುದು ಸಹಜ. ಯಾಕೆ ನ್ಯೂಯಾರ್ಕ್ ನಲ್ಲಿ ಆಗಲ್ವಾ? ಲಂಡನ್ ನಲ್ಲಿ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಅಂಥಾ ವ್ಯವಸ್ಥಿತ ನಗರಗಳಲ್ಲೂ ಈ ಸಮಸ್ಯೆಯಾಗುತ್ತಿದೆ ಎಂದರೆ ನಮ್ಮಲ್ಲಿ ಯಾವ ಲೆಕ್ಕ? ಏನೋ ಒಂದು ವ್ಯವಸ್ಥೆ ಮಾಡುತ್ತೇವೆ. ಮಳೆ ಬಂದಾಗ ಆಕಾಶಕ್ಕೆ ನೀರು ಕಳುಹಿಸಕ್ಕಾಗಲ್ಲ. ಭೂಮಿ ಮೇಲೆಯೇ ಹರಿದುಹೋಗಬೇಕು ಎಂದು ಪರಮೇಶ್ವರ್ ತಮಾಷೆ ಮಾಡಿದ್ದಾರೆ.