ಖ್ಯಾತ ವೈದ್ಯರ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಂಬನಿ ಮಿಡಿದಿದ್ದಾರೆ.
ಹಾಸನ ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ರಾಜೀವ್ ಅವರ ಅಕಾಲಿಕ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕಂಬನಿ ಮಿಡಿದಿದ್ದಾರೆ.
ಡಾ. ರಾಜೀವ್ ಅವರು ಅಪ್ಪಟ ಗ್ರಾಮೀಣ ಹಿನ್ನೆಲೆಯಿಂದ ಬಂದು ಬಡಜನರ ಕಷ್ಟಸುಖ ಅರ್ಥೈಸಿಕೊಂಡು ಅದರಂತೆಯೇ ಕೆಲಸ ಮಾಡಿದವರು.
ರೈತ ಕುಟುಂಬದಿಂದ ಬಂದು ವೈದ್ಯಕೀಯ ಲೋಕದಲ್ಲಿ ತಾವೇ ಮಾದರಿಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದರು.
ಮಕ್ಕಳ ಚಿಕಿತ್ಸೆ ವಿಷಯದಲ್ಲಿ ಡಾ.ರಾಜೀವ್ ಮನೆ ಮಾತಾಗಿದ್ದರು. ವೈದ್ಯ ವೃತ್ತಿಯ ಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಅನೇಕ ಮಕ್ಕಳೂ ಉನ್ನತ ವ್ಯಾಸಂಗ ಪಡೆಯಲು ಆಧಾರಸ್ತಂಭವಾಗಿದ್ದರು.
ನಿಸ್ವಾರ್ಥ ಸೇವೆಯ ಮೂಲಕ ಇಡೀ ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ. ಸಮಾಜಕ್ಕೆ ಅವರಿಂದ ಇನ್ನೂ ದೊಡ್ಡ ಸೇವೆ ಲಭ್ಯವಾಗಬೇಕಿತ್ತು. ಆದರೆ ಅವರು ನಮ್ಮ ನಡುವೆ ಇಲ್ಲ ಎಂಬುದು ವೈಯಕ್ತಿಕವಾಗಿ ಅತೀವ ನೋವು ತರಿಸಿದೆ.
ಅವರ ಅಕಾಲಿಕ ನಿಧನ ನನ್ನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಚ್.ಡಿ. ದೇವೇಗೌಡರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.