ಬೆಂಗಳೂರು : ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಮನ್ಸೂರ್ ಖಾನ್ ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನನ್ನು ಮನ್ಸೂರ್ ಖಾನ್ ಗೆ ಪರಿಚಯಿಸಿದ್ದು ರೋಷನ್ ಬೇಗ್ ಅವರು. ನಾನು ಒಂದೇ ಬಾರಿ ಅವರನ್ನು ಭೇಟಿಯಾಗಿರುವುದು. ಅದೇ ಮೊದಲು, ಅದೇ ಕೊನೆ. ಅಲ್ಲದೇ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ನನ್ನ ಒಬ್ಬನ ಹೆಸರನ್ನೇ ಹೇಳಿಲ್ಲ. ಅನೇಕ ರಾಜಕಾರಣಿಗಳ ಹೆಸರನ್ನು ಹೇಳಿದ್ದಾರೆ. ನಾನು ಮನ್ಸೂರ್ ಖಾನ್ ಜೊತೆಗೆ ಯಾವ ಗೆಳೆತನವನ್ನು ಬೆಳೆಸಿಲ್ಲ ಎಂದು ಹೇಳಿದ್ದಾರೆ.
ಐಎಂಎ ಕಂಪೆನಿ ಬಗ್ಗೆ ನಾನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದೆ. ಇದರಲ್ಲಿ ಹಣ ಹೂಡದಂತೆ ಜನರಿಗೆ ನಾನು ಮೊದಲೇ ಎಚ್ಚರಿಕೆ ನೀಡಿದ್ದೆ. ಆದರೆ ದುರಾಸೆಯಿಂದ ಜನರು ಹಣ ಹೂಡಿ ಮೋಸ ಹೋಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.