ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳ ಟೋಯಿಂಗ್ ವೇಳೆ ಧ್ವನಿವರ್ಧಕಗಳ ಮೂಲಕ ಮುನ್ಸೂಚನೆ ನೀಡಬೇಕೆಂಬ ಸೂಚನೆಯಿದೆ. ಅದರ ಹೊರತಾಗಿಯೂ ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂತಹ ಟೋಯಿಂಗ್ ವಾಹನಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 200ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡು, ನಗರದಲ್ಲಿ ಉದ್ಭವಿಸಿರುವ ಸಂಚಾರ ಸಮಸ್ಯೆಗಳ ಕುರಿತು ನಗರ ಪೆÇಲೀಸ್ ಆಯುಕ್ತರ ಗಮನಸೆಳೆದರು.
ಈ ವೇಳೆ ಕೆಲವರು ಟೋಯಿಂಗ್ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿ, ``ವಾಹನಗಳನ್ನು ಟೋಯಿಂಗ್ ಮಾಡುವ ಮೊದಲು ಸಿಬ್ಬಂದಿಗಳು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡುವುದಿಲ್ಲ. ಏಕಾಏಕಿ ವಾಹನ ಟೋಯಿಂಗ್ ಮಾಡುತ್ತಾರೆ. ಜತೆಗೆ ವಾಹನಗಳಿಗೆ ಹಾನಿಯುಂಟು ಮಾಡುತ್ತಾರೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ವಾಹನ ಸವಾರರ ಜತೆಯೂ ಅನುಚಿತವಾಗಿ ವರ್ತಿಸುತ್ತಾರೆ,'' ಎಂದು ದೂರಿದರು.
ಅದಕ್ಕೆ ಉತ್ತರಿಸಿದ ಪೆÇಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸಂಚಾರ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ, ``ಟೋಯಿಂಗ್ ಸಿಬ್ಬಂದಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹ ಟೋಯಿಂಗ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಜತೆಗೆ ಅದರ ಉಸ್ತುವಾರಿ ವಹಿಸಿದ್ದ ಸಂಚಾರ ಪೆÇಲೀಸ್ ಠಾಣೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುತ್ತೇವೆ. ಟೋಯಿಂಗ್ ಮಾಡುವಾಗ ವಾಹನಗಳು ಹಾನಿಗೊಳಗಾದಲ್ಲಿ ಕೂಡಲೇ ಸಂಬಂಧಪಟ್ಟ ಸಂಚಾರ ಠಾಣೆ ಇನ್‍ಸ್ಪೆಕ್ಟರ್‍ಗೆ ದೂರು ನೀಡಿದರೆ, ರಿಪೇರಿ ಮಾಡಿಕೊಡುವ ಅವಕಾಶ ಇದೆ," ಎಂದು ಹೇಳಿದರು.
ಪಾರ್ಕಿಂಗ್ ಸಮಸ್ಯೆ:
ಕೆಲವು ರಸ್ತೆಗಳು ಕಿರಿದಾಗಿದ್ದು, ಅವುಗಳಲ್ಲಿಯೂ ವಾಹನಗಳ ಪಾರ್ಕಿಂಗ್ ಮಾಡುತ್ತಾರೆ. ಇನ್ನೂ ಕೆಲ ರಸ್ತೆಗಳಲ್ಲಿ ಒಂದು ಕಡೆ ಮಾತ್ರ ಪಾರ್ಕಿಂಗ್ ಮಾಡಲಾಗುತ್ತಿದೆ. ಹೀಗಾಗಿ ಎರಡು ಕಡೆಯೂ ಪಾರ್ಕಿಂಗ್‍ಗೆ ಅವಕಾಶ ನೀಡಬೇಕು. ಈ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಜತೆಗೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಆಯತಪ್ಪಿ ರಸ್ತೆ ಅಪಘಾತವಾದರೆ, ವೇಗವಾಗಿ ವಾಹನ ಚಾಲನೆ ಮಾಡುವ ವಾಹನ ಸವಾರರನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
`ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಆಗಾಗ್ಗೆ ಪತ್ರ ಮೂಲಕ ಮನವಿ ಮಾಡಲಾಗುತ್ತಿದೆ. ಜತೆಗೆ ಸಂಚಾರ ಪೆÇಲೀಸರು ತಮ್ಮ ವ್ಯಾಪ್ತಿಯಲ್ಲಿ ಉಂಟಾಗಿರುವ ಗುಂಡಿಗಳನ್ನು ಸ್ಥಳೀಯರ ನೆರವಿನೊಂದಿಗೆ ಮುಚ್ಚುತ್ತಿದ್ದಾರೆ' ಎಂದು ರವಿಕಾಂತೇಗೌಡ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಎಸ್.ಸವಿತಾ, ಎಸಿಪಿ ಅಶೋಕ್, ಆರ್.ಟಿ.ನಗರ ಠಾಣೆ ಇನ್‍ಸ್ಪೆಕ್ಟರ್ ಚಂದ್ರಶೇಖರ್ ಇದ್ದರು. ಇನ್ನು ವೈಟ್‍ಫೀಲ್ಡ್ ಸಂಚಾರ ಠಾಣೆಯಲ್ಲಿ ಕೆ.ಎಂ.ಶಾಂತರಾಜು ಮತ್ತು ವಿ.ವಿ.ಪುರ ಸಂಚಾರ ಠಾಣೆಯಲ್ಲಿ ಕುಲದೀಪ್ ಕುಮಾರ್ ಜೈನ್ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಅಹವಾಲು ಆಲಿಸಿದರು.